-->

ಕರ್ನಾಟಕದ ಪ್ರಾಕೃತ ಶಾಸನಗಳಲ್ಲಿಯ (ವ್ಯಕ್ತಿ) ನಾಮಗಳು

MadhuNews | Thursday, June 12, 2025


ಕರ್ನಾಟಕದಲ್ಲಿ ಸು. ೧೦೫ ರಷ್ಟು ಪ್ರಾಕೃತ ಶಾಸನಗಳು ಪತ್ತೆಯಾಗಿವೆ. ಸನ್ನತಿ, ಬೆಳ್ವಾಡಗಿ, ಚಿಕ್ಕಸಿಂದಗಿ, ನಿಟ್ಟೂರು, ಉದೊಗೋಳ, ಮಸ್ಕಿ, ಕೊಪ್ಪಳ, ಹುರುಸುಗಂದಿ, ಹಂಪಿ, ಬೆಳಗಾವಿ (ಮಾಧವಪುರ-ವಡಗಾವಿ) ಬನವಾಸಿ, ವಾಸನ (ಧಾರವಾಡ ಜಿ.) ಚಂದ್ರವಳ್ಳಿ, ಮಳವಳ್ಳಿ ಸಿದ್ಧಾಪುರ, ಬ್ರಹ್ಮಗಿರಿ, ಜಟಿಂಗ ರಾಮೇಶ್ವರ, ಹಿರೇಮಗಳೂರು ಈ ಮೊದಲಾದ ಊರುಗಳಲ್ಲಿ ಇವು ದೊರೆತಿದ್ದು, ಸನ್ನತಿ ಪರಿಸರದಲ್ಲಿ ಇನ್ನೂ ಇಂಥ ಬರಹಗಳು ಪತ್ತೆಯಾಗುತ್ತಿವೆ. ಈಗಿನ ಮಹಾರಾಷ್ಟ್ರದ ಕೊಲ್ಲಾಪುರ, ಕಾಣ್ಹೇರಿ, ಕಾರ್ಲೆ ಮೊದಲಾದ ಪ್ರದೇಶಗಳು ಮುಂಚೆ ಕರ್ನಾಟಕದ ಭಾಗಗಳಾಗಿರುವ ಸಾಧ್ಯತೆ – ವಿಶೇಷವಾಗಿದೆ. ಕಾಣ್ಹೇರಿ ಊರ ಹೆಸರಿನಲ್ಲಿರುವ ವಾರ್ಗಿಕರೂಪ – ಏರಿ ಅಚ್ಚಕನ್ನಡದ್ದು. ಆದರೆ ಸದ್ಯ ಹೊರ ನಾಡೆನಿಸುವ ಈ ಪ್ರದೇಶದ ಶಾಸನಗಳನ್ನು ಈ ಅಧ್ಯಯನದಿಂದ ಹೊರಗಿಡಲಾಗಿದೆ. ಆದರೆ ಕಾರ್ಲೆಯ ಚೈತ್ಯಾಲಯದ ಶಾಸನದಲ್ಲಿ ಕಂಡುಬರುವ ಬನವಾಸಿಯ ವ್ಯಾಪಾರಿ ‘ಭೂತಪಾಲ’ ನ ಹೆಸರನ್ನು ಮಾತ್ರ ಇಲ್ಲಿ ಸೇರಿಸಿದೆ.
ಸನ್ನತಿ ಮತ್ತು ಅದರ ಪರಿಸರದಲ್ಲಿ ಮತ್ತು ಅಲ್ಲಿನ ಸ್ತೂಪಾವಶೇಷಗಳಲ್ಲಿ ಈವರೆಗೆ ಸು. ೭೭ ರಷ್ಟು ಚಿಕ್ಕ-ದೊಡ್ಡ ಪ್ರಾಕೃತ ಶಾಸನಗಳು ಲಭ್ಯವಾಗಿದ್ದು ಅವುಗಳ ಪೈಕಿ ಮೌರ್ಯ ಚಕ್ರವರ್ತಿ ಅಶೋಕನವು ನಾಲ್ಕು ಮತ್ತು ಸಾತವಾಹನ ದೊರೆ ಸಿರಿಸಾತಕಣಿ (ಶ್ರೀ ಶಾತಕರ್ಣಿ) ಯ ಒಂದು ಶಾಸನಗಳು ದೊಡ್ಡವು, ಉಳಿದವು ಬಿಡಿ ಬರಹಗಳಾಗಿದ್ದು ಅಲ್ಲಿನ ಬೌದ್ಧವಿಹಾರಗಳಿಗೆ ಒಂದಿಲ್ಲೊಂದು ರೀತಿಯ ಸ್ಮಾರಕ ರಚನೆ ಅಥವಾ ಸೇವಾಕಾರ್ಯ ಸಲ್ಲಿಸಿದವರ ಹೆಸರುಗಳಾಗಿವೆ.

ಸನ್ನತಿಯಲ್ಲಿ ಇತ್ತೀಚೆಗೆ (೧೯೮೯) ಪತ್ತೆಯಾಗಿರುವ ಅಶೋಕನ ನಾಲ್ಕು ಶಾಸನಗಳಿಂದಾಗಿ ಪ್ರಾಚೀನ ಕರ್ನಾಟಕದ ಚರಿತ್ರೆಯ ಮೇಲೆ ಹೊಚ್ಚಹೊಸಬೆಳಕು ಬಿದ್ದಿದೆ. ಆ ನಾಲ್ಕರ ಪೈಕಿ ಎರಡು ಶಾಸನ ಪಾಠಗಳು ಓಡಿಸಾದ ಧೌಲಿ ಮತ್ತು ಜೌಗಡಾಗಳಲ್ಲಿ ಮಾತ್ರ ದೊರೆಯುತ್ತಿದ್ದು ಇತರತ್ರ ಕಂಡು ಬಂದಿಲ್ಲ. ಈ ಅಧಿಕ ಶಾಸನ ಗಳನ್ನು ಸನ್ನತಿಯಲ್ಲಿ ಕೆತ್ತಿಸಲು ಏನು ಕಾರಣವೊ ? ಮಹತ್ವದ ಘಟನೆಯೊಂದು ಕಾರಣವಾಗಿರಬಹುದಾದ ಶಕ್ಯತೆಯನ್ನು ಊಹಿಸಬೇಕಾಗುತ್ತದೆ. ಇತರತ್ರ ನೈಸರ್ಗಿಕ ಬಂಡೆಗಳ ಮೇಲೆ ಅಶೋಕ ತನ್ನ ಶಾಸನಗಳನ್ನು ಕೆತ್ತಿಸಿದ್ದು ವಿಶೇಷವಾದರೆ ಇಲ್ಲಿ ಬಿಡಿಗೊಂಡ ಶಿಲಾಫಲಕಗಳ ಮೇಲೆ ಕೆತ್ತಿಸಿದ್ದಾನೆ. ಶಾತಕರ್ಣಿಯ ಶಾಸನದಲ್ಲಿ ಅಂದಿನ ಕಾಲದ ಒಟ್ಟು ೧೨ ಅಥವಾ ೧೩ ರಾಜಮನೆತನ / ಪ್ರದೇಶಗಳು ಉಲ್ಲೇಖಗೊಂಡು ಚರಿತ್ರೆಯ ಮೇಲೆ ಹೊಸಬೆಳಕು ಬೀರುತ್ತಿವೆ. ಕ್ರಿ.ಶ. ಒಂದನೆಯ ಶತಮಾನದಲ್ಲಿಯೇ ಈ ಭಾಗದಲ್ಲೊಂದು ರಟ್ಟ ರಾಜ್ಯವಿದ್ದ ಬಗ್ಗೆ ಈ ಶಾಸನ ಸಾಕ್ಷಿ ನುಡಿಯುತ್ತಿದೆ. ಮೌರ್ಯರ ತರುವಾಯ ಕ್ರಿ.ಶ. ಪೂ.ಒಂದನೆಯ ಶತಮಾನದಿಂದ ಎರಡನೆಯ ಶತಮಾನದ ವರೆಗೆ ಶಾತವಾಹನರು, ಜತೆಗೆ, (ಮೂಳ (ಡ) ಕ) ಜಯವಿ, ಚಕೋರ, ವಲ (ವಲ್ಲಭ ?) ರಠ (ರಟ್ಟ) ಮತ್ತು ಇತರ ದಕ್ಷಿಣ ಭಾಗದ ಇನ್ನೂ ಕೆಲವು ಬೇರೆ ರಾಜಮನೆತನಗಳವರು ಮಾಂಡಲಿಕರೊ ಸ್ವತಂತ್ರರೋ ಆಗಿ ರಾಜ್ಯ ವಾಳುತ್ತ ಕರ್ನಾಟಕದ ಬಹುಭಾಗವನ್ನು ವ್ಯಾಪಿಸಿದ್ದರೆಂದು ಸನ್ನತಿಯ ಈ ಸಾತವಾಹನ ಶಾಸನ ಖಚಿತವಾಗಿ ಹೇಳುತ್ತಿದೆ. ಬೌದ್ಧಧರ್ಮದ ಜತೆಗೆ ಆಗಲೇ ಇಲ್ಲಿ ವೈದಿಕರು ಮತ್ತು ಶಿವ (ಲಿಂಗ) ಕಾರ್ತಿಕೇಯ, ನಾಗರ, ಹಾರೀತಿ ಎಂಬು ಮಾತೃ ದೇವತೆ – ಮೊದಲಾದ ಧಾರ್ಮಿಕ ಪರಂಪರೆಯವರು ನೆಲೆಯೂರಿದ್ದ ಬಗ್ಗೆಯೂ ಈ ಶಾಸನಳಿಂದ ಮಾಹಿತಿ ತಿಳಿದು ಬರುತ್ತಿದೆ. ಸನ್ನತಿ, ಮಸ್ಕಿ, ಕೊಪ್ಪಳ, ನಿಟ್ಟೂರು, ಉದೋಗೋಳ, ಬ್ರಹ್ಮಗಿರಿ, ಸಿದ್ಧಾಪುರ, ಜಟಿಂಗರಾಮೇಶ್ವರ, ಬನವಾಸಿ, ಮೊದಲಾದೆಡಗಳಲ್ಲಿ ಬೌದ್ಧಕೇಂದ್ರಗಳಿದ್ದವು ; ಮಳವಳ್ಳಿ ಮತ್ತು ವಾಶನ ಶೈವಕೇಂದ್ರವಾಗಿದ್ದವು ; ಬೆಳಗಾವಿ, ಹಿರೇಮಗಳೂರು, ಹಿರೇಹಡಗಲಿ ಪ್ರದೇಶಗಳಲ್ಲಿ ವೈದಿಕರು ನೆಲೆಯೂರಿದ್ದರು. ನಾಗಾರಾಧನೆ ಕರ್ನಟಕದ ಮೂಲೆಮೂಲೆಗಳಲ್ಲಿ ಪಸರಿಸಿದ್ದಷ್ಟೇ ಅಲ್ಲ ರಾಜ ಮನೆತನದವರೂ ಅದನ್ನು ಅನುಸರಿಸುತ್ತಿದ್ದರು.

ಉತ್ತರದ ಗುಪ್ತರು ಮಧ್ಯದ ವಾಕಾಟಕರಂತೆ – ಕರ್ನಾಟಕದ ಕದಂಬರೂ ಪ್ರಾಕೃತವನ್ನು ನಿರಾಕರಿಸಿದರು. ಅವರು ಸಂಸ್ಕೃತವನ್ನು ಎತ್ತಿ ಹಿಡಿದದ್ದಲ್ಲದೆ ಕನ್ನಡಕ್ಕೂ ತಮ್ಮ ಆಡಳಿತದಲ್ಲಿ ದ್ವಿತೀಯ ರಾಜಭಾಷೆಯ ಸ್ಥಾನವಿತ್ತರು. ಹಲ್ಮಿಡಿ ಶಾಸನ ಪೂರ್ವದ ಶಾಸನಗಳೆಂದರೆ ಬಹುತೇಕ ಪ್ರಾಕೃತ ಶಾಸನಗಳು ಮಾತ್ರ. ಇವುಗಳಲ್ಲಿ ಕೆಲವು ಚೂರು-ಪಾರು ಕನ್ನಡ ಅವಶೇಷಗಳು ಕಂಡುಬಂದಿದೆ. ಇಂಥ ಕನ್ನಡ ಅಂಶಗಳನ್ನು ಕುರಿತು ಬೇರೆಡೆ ಈಗಾಗಲೇ ಚರ್ಚಿಸಿದ್ದೇನೆ. ಡಿ.ಎಲ್.ಎನ್ ಹೇಳಿರುವ ಇಸಿಲ, ನಾನು ಹೇಳಿರುವ ‘ನಾಟಪತಿ’ ಕೋಟ್ಟ, ಕೋಟ್ಟಿ, ಆಪಿಟ್ಟಿ, ಸಂಕಪ, ಮೂಡಾಣ, ವೆಟ್ಟಕ್ಕಿ, ವೇಗೂರ, ಮಟ್ಟ ಪಟ್ಟಿ ಮರಿಯಸೆ, ಕೊಂಗಿ, ಕುಂದ, ಆಪಕುಟಿ ನಗಿಪ, ಮುನಾಳ, ಸೇನನ್ಹ, ಬಲಿವದಾರ ಮೊದಲಾದವುಗಳಲ್ಲಿ ಅಂಥ ಅಂಶಗಳಿವೆಯಾದರೂ ಇಂಡೋ-ಆರ್ಯನ್ ಮೂಲದ ಸಾಮಗ್ರಿಯೇ ಇಲ್ಲಿ ಮುಖ್ಯವಾಗಿದೆ. ಇದರಲ್ಲಿ ಪಶ್ಚಿಮ ಕ್ಷತ್ರಪರನ್ನು ಕುರಿತಂತೆ ಖಖರತ (ಖಹರಾತ), ತುವೇರ ಎಂಬಂಥ ಶಬ್ದ ಸಾಮಗ್ರಿ ಕೂಡ ಸಮಾವಿಷ್ಟವಾಗಿದೆ. ಕ್ಷತ್ರಪರು ಆರ್ಯ ಮೂಲದವರೇ ಆದರೂ ಇನ್ನಿತರ ಭಾರತೀಯ ಆರ್ಯ ಭಾಷೆಗಳಿಗಿಂತ ಕೊಂಚ ಭಿನ್ನವಾದ ಭಾಷೆಯನ್ನಾಡುವವರಾಗಿದ್ದರು. ಅಂತು ಈ ಶಾಸನಗಳಲ್ಲಿ ಸು.೧೭೫ ಕ್ಕಿಂತ ಹೆಚ್ಚು ವ್ಯಕ್ತಿನಾಮಗಳು ಮತ್ತು ಅವುಗಳ ವಿಶೇಷಣ ರೂಪಗಳು ಕಂಡು ಬಂದಿವೆ. 

ಮೇಲೆ ಸೂಚಿಸಿದಂತೆ ಕ್ರಿ.ಶ. ಪೂರ್ವ ೩ನೆಯ ಶತಮಾನದಿಂದ ಕ್ರಿ.ಶ. ೪ನೆಯ ಶತಮಾನದವರೆಗೆ ಕರ್ನಾಟಕದಲ್ಲಿ ತೋರುವ ಈ ಶಾಸನಗಳಲ್ಲಿ ವ್ಯಕ್ತಿನಾಮಗಳ ಹಲವು ವಿಧಗಳು ಕಂಡು ಬರುತ್ತವೆ. ಈ ಅವಧಿ ರಾಜಸತ್ತೆಯ ಕಾಲವಾದುದರಿಂದ ಚಕ್ರವರ್ತಿ, ಮಹಾಮಾತ್ರ, ಮಹಾರಠಿ, ರಠಿಕ, ಅಮಾತ್ಯ, ರಜ್ಜುಕ, ವಲ್ಲಭ, ವಲ್ಲವ, ಗೋವಲ್ಲವ, ಮಹಾಗಾಮಿ, ಗಾಮಿಕ (=ಗೌಡ), ಭೋಜಕ, ಮೊದಲಾದ ಆಡಳಿತ ವರ್ಗದವರೂ, ಬ್ರಾಹ್ಮಣ, ಲೇಖಕ, ನೇಕಾರ ಮೊದಲಾದ ವೃತ್ತಿ-ಜಾತಿಗಳವರೂ ಇಲ್ಲಿ ತೋರಿ ಬಂದಿದ್ದಾರೆ. ಇವರಿಗೆ ಪ್ರತ್ಯೇಕ ಹೆಸರುಗಳು ಕೆಲವೊಮ್ಮೆ ಇರಬಹುದು. ಇನ್ನು ಕೆಲವೊಮ್ಮೆ ಕೇವಲ ಇವರ ಸ್ಥಾನಸೂಚನೆ ಮಾತ್ರದಿಂದ ಉಲ್ಲೇಖಿಸಿದ್ದು ಕಂಡು ಬರುತ್ತದೆ.

-ಇನಿ, -ಸಮಜ, -ಸಮಸತ್ತಿ, – ಸಿರಿಕಾ ಈ ವಾರ್ಗಿಕಗಳಲ್ಲಿದ್ವಿರುಕ್ತಿ ಕಂಡು ಬಂದಿದೆ.ದ ವಿಶಿಷ್ಟಗಳಲ್ಲಿಯೂ ದ್ವಿರುಕ್ತಿಯಿರುವುದು ಸಾಮಾನ್ಯ ಸಂಗತಿ. ಕೋಂಡಿ ಎಂದಿರುವ ರೂಪ ಕೋಟಿ/ಕೋಟ್ಟಿಯಿಂದ ಬಂದುದೆಂದು ಭಾವಿಸಲಾಗಿದೆ. ಇದು ದ್ರಾವಿಡ ಮೂಲದ್ದು. ಅದೇ ರೀತಿ ಕೊಂಡ-ಮಾಣ ಎಂದಿರುವಲ್ಲಿನ-ಮಾಣ ಎಂಬುದು-ಅಮ್ಮಾನ್ ಎಂಬ ದ್ರಾವಿಡ ಮೂಲದಿಂದಲೇ ಸಿದ್ಧಿಸಿದ್ದು. ಕೊಂಡ ಎಂಬುದು ಗುಡ್ಡ-ಬೆಟ್ಟ ಎಂಬರ್ಥದ ದ್ರಾವಿಡ ಪದವೇ. ಬೆಟ್ಟದ ದೇವರು ಎಂಬುದು ಇದರ ಮೂಲಾರ್ಥ, ನಗಿಪ ಸಂಕಪ ಎಂಬೆರಡು ಉದಾಹರಣೆಗಳಲ್ಲಿರುವ -‘ಪ’ ಸಂಪಾದಕರು ಊಹಿಸಿದಂತೆ ಕನ್ನಡ ಮೊದಲಾದ ದ್ರಾವಿಡ ಭಾಷೆಯ ಅಪ್ಪನ್ ಎಂಬುದರ ಸ್ವೀಕೃತರೂಪ. ಆಪ-ಕುಟಿ ಎಂಬ ಹೆಸರಿನಲ್ಲಿರುವ ವಿಶಿಷ್ಟ-ಅಪ, ವಾರ್ಗಿಕ ಕುಟಿ (<ಕುಟ್ಟಿ) ಎಂಬೆರಡೂ ಕನ್ನಡ/ದ್ರಾವಿಡ ಮೂಲದವು. ಸಮ, ಪುತ, ಸತ್ತಿ, ಆಯ, ಮೊದಲಾದ ಪ್ರಾಕೃತ ರೂಪಗಳು ತರುವಾಯ ಸಂಸ್ಕೃತಕ್ಕೆ ತಿರುಗಿದವು. ದಾಸ/ದಾಸಿ, -ದೇವ, -ಧರ, -ನಂದ, -ನಂದಿ, – ನಾಥ, -ಭೂತಿ ಮೊದಲಾದುವು ಮುಂಚಿನಿಂದಲೂ ಸಂಸ್ಕೃತಿ- ಪ್ರಾಕೃತಗಳಿಗೆ ಸಮಾನವಾಗಿದ್ದುದು ಗಮನಾರ್ಹ. ಸನ್ನತಿ ಶಾಸನ (ನಂ. ೧) ದ ಖಖರತ ಎಂಬ ಪ್ರಯೋಗದಲ್ಲಿ ಕಂಡು ಬಂದಿರುವ -ರತ ಎಂಬುದು -ರಾತ ಎನ್ನುವ ಇನ್ನೊಂದು ರೂಪ. ಈಗಿನ ಗುಜರಾತ ಎಂಬ ಪ್ರದೇಶವಾಚಕದಲ್ಲಿ ಅದು ಈಗಲೂ ಉಳಿದು ಬಂದಿದೆ. ಬಹುಶಃ ಇದು ಇಂಡೋ – ಆರ್ಯನ್ ಪದವಲ್ಲ; ಕ್ಷತ್ರಪರ ಭಾಷೆಯದು. (ತುವೇರ’ ಎಂಬುದೂ ಅಂಥದೇ ಇನ್ನೊಂದು ರೂಪ.) ಸಿದ್ಧಾಪುರ- ಬ್ರಹ್ಮಗಿರಿ ಶಾಸನಗಳಲ್ಲಿ ಕಂಡುಬಂದಿರುವ ಲೇಖಕ ‘ಚಪಡ’ನ ಹೆಸರಿನ ಮೂಲ ನಿಗೂಢವಾಗಿದೆ.

ದಿವಂಗತ ರಾಷ್ಟ್ರಪಿತ

ರಾಷ್ಟ್ರಪಿತ ದಿವಂಗತ
ಉನ್ಮತ್ತ ಹಸ್ತ ಹತ!
ನರಹೃದಯದ ವಿಷವಾರ್ಧಿಗೆ
ಜೀವಾಮೃತ ಸಮರ್ಪಿತ!
ಕ್ಷಮಿಸು, ಓ ಜಗತ್‌ಪಿತಃ
ಅದೃಷ್ಟ ಹೀನ ಭಾರತ!

ನಮ್ಮ ರಾಷ್ಟ್ರದ ಪಿತಾಮಹನು ರಣರಂಗದ ಮಧ್ಯೆ ಶರಶಯ್ಯೆಯಲ್ಲಿ ಅಸ್ತಂಗತನಾದನು. ನಮ್ಮ ಸಾಕ್ರೆಟೀಸನಿಗೆ ವಿಷಪಾನ ಮಾಡಿಸಿಯಾಯಿತು. ನಮ್ಮ ಯೇಸು ಕ್ರಿಸ್ತನು ಶಿಲುಬೆಗೇರಿದನು. ಜಗದ್ವಂದ್ಯ ಲೋಕಗುರು ಪೂಜ್ಯ ಮಹಾತ್ಮಾಗಾಂಧಿ ತಲೆಕೆಟ್ಟ ಕೊಲೆಗಾರನೊಬ್ಬನ ಕ್ರೂರ ಹಸ್ತದಿಂದ ಪ್ರಾರ್ಥನಾ ಸಭೆಯ ವೇದಿಕೆಯ ಮೇಲೆ, ತಮ್ಮಿಬ್ಬರು ಮೊಮ್ಮಕ್ಕಳ ಪ್ರೇಮ ಬಾಹುಗಳ ನಡುವೆ ನಿಂತು, ತಮ್ಮನ್ನು ಸ್ವಾಗತಿಸುತ್ತಿದ್ದ ವಿಪುಲಜನವೃಂದಕ್ಕೆ ತಮ್ಮೆರಡು ಕೈಗಳನ್ನೂ ಹಣೆಗೆತ್ತಿ ನಮಸ್ಕರಿಸುತ್ತಿದ್ದಾಗಲೇ ಮೃತ್ಯು ರಾಹುವಿಗೆ ತುತ್ತಾದರು. ವೇದಿಕೆಯ ಮೇಲೆ ಅತಿ ಸಮೀಪದಲ್ಲಿ ಕುಳಿತ ಹಿಂದೂ ಯುವಕನೊಬ್ಬನು ಚಿಮ್ಮಿ ನಿಂತು ಅವರ ತೆರೆದೆದೆಗೆ ಗುಂಡಿಟ್ಟು ಕೊಂದನಂತೆ. ಹಿಂದೆಂದೂ ಭರತಖಂಡದಲ್ಲಿ ನಡೆಯದಂತಹ ಇಂತಹ ಅಸಹ್ಯವಾದ ಘೋರ ಪಾತಕವನ್ನು ಇಂದು ನಡೆಸಿ ನಮ್ಮ ದೇಶಕ್ಕೆ ದೇಶವೇ ಜಗತ್ತಿನ ಮುಂದೆ ಮಹಾಪರಾಧಿಯಾಗಿದೆ; ಅವಮಾನಿತವಾಗಿದೆ; ನಾವು ತಲೆಯೆತ್ತಿ ನಡೆಯದಂತಾಗಿದೆ. ನಮ್ಮ ದೇಶ ತಿರಸ್ಕಾರಕ್ಕೊ ಶಾಪಕ್ಕೂ ಪಕ್ಕಾಗಿದೆ. ಈ ಪಾಪಕರ್ಮಕ್ಕೆ ತಕ್ಕ ತಪಸ್ಯೆಯಿಂದ ಪಶ್ಚಾತ್ತಾಪದಿಂದ ಪ್ರಾಯಶ್ಚಿತ್ತಮಾಡಿಕೊಳ್ಳದಿದ್ದರೆ ನಮಗೆ ಯೇಸು ಕ್ರಿಸ್ತನನ್ನು ಮೊಳೆಹೊಡೆದು ಕೊಂದ ಜನಾಂಗಕ್ಕಾಗಿರುವ ದುರ್ಗತಿಯೇ ಒದಗುತ್ತದೆಯೋ ಏನೋ ಎಂದು ಹೆದರಿಕೆಯಾಗುತ್ತಿದೆ.

ಮತ್ತೇನಿದ್ದೀತು ನಾವು ಕೈಕೊಳ್ಳುವ ಆ ಪ್ರಾಯಶ್ಚಿತ್ತ? ಯಾವ ಮಹಾಪುರುಷನ ಪ್ರೇಮಮಯ ಹೃದಯವು ಗುಂಡು ತಗುಲಿ ಬಿರಿಯಿತೋ ಆ ಹೃದಯದ ಆಶೆ ಆಕಾಂಕ್ಷೆ ಆದರ್ಶಗಳನ್ನು ಅಚಂಚಲವಾದ ದೃಢತೆಯಿಂದ ಆಚರಿಸಿ ಸಾಧಿಸುವುದೊಂದೇ ನಮಗೆ ಮುಂದಿರುವ ಶ್ರೇಯೋಮಾರ್ಗ. ಶಿಲುಬೆಗೇರಿದ ಯೇಸು ಕ್ರಿಸ್ತನಿಗೆ ‘ಕ್ಷಮಿಸು, ತಂದೆ!’ ಎಂದು ಮಾನವರ ಪರವಾಗಿ ಭಗವಂತನನ್ನು ಬೇಡಲು ಸ್ವಲ್ಪ ಪ್ರಜ್ಞೆಯಾದರೂ ಇತ್ತಂತೆ. ನಿನ್ನೆ ಮಡಿದ ನಮ್ಮ ಕ್ರಿಸ್ತನಿಗೆ ಅಷ್ಟಕ್ಕೂ ಅವಕಾಶಕೊಡದಷ್ಟು ಬೇಗನೆ ಪ್ರಜ್ಞೆ ಹೋಯಿತಂತೆ. ಆದರೂ ಆತನ ಮುಖಮುದ್ರೆ ಪ್ರಶಾಂತವಾಗಿ, ಕ್ಷಮಾಶೀಲವಾಗಿ, ಧ್ಯಾನ ಪೂರ್ಣಶಾಂತಿಯಿಂದ ತುಂಬಿ, ‘ಕ್ಷಮಿಸು ತಂದೆ!’ ಎನ್ನುವಂತಿತ್ತೆಂದು ಆ ವರ್ಣನೆಯನ್ನು ಕೇಳಿದವರೆಲ್ಲರಿಗೂ ವೇದ್ಯವಾಗಿರಬೇಕು. ಮೃತಸ್ಥಿತಿಯಲ್ಲಿಯೂ ಅಮೃತವನ್ನೇ ಪ್ರೋಕ್ಷಿಸುತ್ತಿದ್ದ ಆ ಮುಖನಿದ್ರೆಯ ಸಂದೇಶ-ಕ್ಷಮೆ, ಪ್ರೇಮ, ಸತ್ಯ, ಅಹಿಂಸೆ ಇವು ನಮಗೆ ರಕ್ಷಾಮಂತ್ರಗಳಾಗಬೇಕು. ಹಾಗಾದರೆ ಮಾತ್ರವೆ ನಮ್ಮ ದೇಶದ ಸದ್ಯೋಜಾತ ಸ್ವಾತಂತ್ಯ್ರಕ್ಕೆ ರಕ್ಷಾಯಂತ್ರ ಸಿದ್ಧವಾಗುತ್ತದೆ.

ಎಷ್ಟು ಅನಿರೀಕ್ಷಿತ, ಎಷ್ಟು ಆಕಸ್ಮಿಕ, ಎಷ್ಟು ಭಯಂಕರವಾಗಿತ್ತು ನಿನ್ನೆ ಬಂದ ಆ ಘೋರ ವಾರ್ತೆ! ಮೊನ್ನೆತಾನೆ ಆಮರಣ ಪರ್ಯಂತ ಕೈಕೊಂಡ ಉಪವಾಸ ವ್ರತದಿಂದ ದೆಹಲಿಯ ವಿಷಸಮುದ್ರವನ್ನೂ ಕ್ಷೀರಸಾಗರವಾಗಿ ಪರಿವರ್ತಿಸಿ, ಲೋಕದ ಪ್ರಶಂಸೆಗೂ ಪೂಜೆಗೂ ಕೃತಜ್ಞತೆಗೂ ಪಾತ್ರರಾಗಿದ್ದರು. ಅಲ್ಲದೆ ನಮ್ಮೆಲ್ಲರಲ್ಲಿ ಮತ್ತೊಂದು ಹೊಸ ಆಶೆಯನ್ನೂ ಪ್ರಚೋದಿಸಿದ್ದರು. ನೂರಿಪ್ಪತ್ತೈದುವರ್ಷದ ಹೊಂಗನಸು ಎಪ್ಪತೆಂಟಕ್ಕೇ ಬಿರಿಯುವಂತೆ ಮಾಡಿದ ಈಶ್ವರೇಚ್ಛೆಯ  ಕಟುಲೀಲೆಗೆ ಏನು ಹೇಳುವುದು? ತಲೆಬಾಗಿ ಮೂಕರಾಗುವುದೊಂದೇ ದಾರಿ. ಆ ವಾರ್ತೆ ಕಿವಿಗೆ ಬಿದ್ದಾಗ ಜನ ನಕ್ಕುಬಿಟ್ಟರು. ಅದನ್ನು ತಿಳಿಸಿದವರಿಗೆ ಛಿಃ ಮಾಡಿದರು. ಸತ್ತರೆಂದು ನಂಬುವುದಾದರೂ ಎಂತು? ಗುಂಡು ಬಿದ್ದು ಸತ್ತರೆಂದಾಗಲಂತೂ ಯಾರೂ ನಂಬದೆಹೋದರು. ಏನು? ಗಾಂಧೀಜಿಗೆ? ಗುಂಡಿನೇಟು? ಅಸಾಧ್ಯ! ಅಸಂಭವ? ಅವಿವೇಕ! ಸುಳ್ಳು! ಖಂಡಿತ ಸುಳ್ಳು! ಅಕಾಶವಾಣಿ ಶೋಕವಾರ್ತೆಯನ್ನು ಮತ್ತೆ ಮತ್ತೆ ಒತ್ತಿಯೊತ್ತಿ ಹೇಳಿದಾಗ ನಂಬಲೇಬೇಕಾಗಿ ಬಂತು. ಆಗಂತೂ ಜನರಲ್ಲುಂಟಾದ ಕಳವಳ ಭೀತಿ, ನಿರಾಶೆ, ಸಂಕಟ ಇವುಗಳನ್ನು ಹೇಳತಿರದು. ಬದುಕಿನ ಅರ್ಥವೇ ಇದ್ದಕ್ಕಿದ್ದಂತೆ ಶೂನ್ಯವಾದಂತಾಯಿತು, ಜೀವನದ ಪ್ರಯೋಜನವೇ ಕೊನೆಮುಟ್ಟಿದಂತೆ ತೋರಿತು. ಗಾಂಧಿ ಇಲ್ಲದ ಜಗತ್ತು! ತೆಗೆ ತೆಗೆ ಅದೆಲ್ಲಿಯ ಮಾತು! ಎರಡು ತಲೆಮಾರುಗಳಿಂದ ಪ್ರಪಂಚದ, ಅದರಲ್ಲಿಯೂ ಭರತ ಖಂಡದ, ಬಾಳನ್ನೆಲ್ಲ ಆವರಿಸಿ, ಉಸಿರನ್ನೆಲ್ಲ ತುಂಬಿ ಚೇತನಕ್ಕೆ ಶಕ್ತಿಯಾಗಿ, ಕಣ್ಣಿಗೆ ಬೆಳಕಾಗಿ, ದಾರಿಗೆ ಸಂಗಾತಿಯಾಗಿ, ಕೆಳೆಯನಾಗಿ, ನಾಯಕನಾಗಿ, ಸುಧಾರಕನಾಗಿ, ಮಾರ್ಗದರ್ಶಿಯೂ ಗುರುವೂ ಆಗಿದ್ದ ಗಾಂಧಿಯಿಲ್ಲದ ಜಗತ್ತು ಜಗತ್ತೆ? ಅದೊಂದು ಅಮಂಗಲ ವಿಪತ್ತು! ಉಳಿದವರ ಮಾತಿರಲಿ! ನೆಹರು, ಪಟೇಲ್, ಅಜಾದ್‌ಅಂಥವರಿಗೂ ಏನಾಯಿತೆಂಬುದನ್ನು ರೇಡಿಯೋದಿಂದ ಕೇಳಿದ್ದೇವೆ. ಭಾರತದ ಪ್ರಧಾನಿ ಮತ್ತು ಉಪಪ್ರಧಾನಿ ಇಬ್ಬರೂ ದೆಹಲಿಯಿಂದ ಮಾಡಿದ ಪ್ರಸಾರ ಭಾಷಣಗಳಲ್ಲಿ ತಮ್ಮ ತಮ್ಮ ಸಹಜ ಧೈರ್ಯವನ್ನೂ ಒತ್ತಿ ಮೀರಿಬಂದ ದುಃಖಾತಿಶಯಕ್ಕೆ ಗದ್ಗದ ಧ್ವನಿ ನೀಡಿದುದನ್ನು ನಾವೆಲ್ಲರೂ ಆಲಿಸಿ ಮರುಗಿದ್ದೇವೆ.

ನಿಜ, ನಮ್ಮ ದುಃಖಕ್ಕೆ ತೀರವಿಲ್ಲ; ನಮ್ಮ ನಷ್ಟಕ್ಕೆ ಅಳತೆಯಿಲ್ಲ. ಎಂದೆಂದಿಗೂ ಪಡೆಯಲಾಗದ ಒಡವೆ ಚ್ಯುತವಾಗಿದೆ. ನಮ್ಮ ಆಧ್ಯಾತ್ಮಿಕ ರಿಕ್ತತೆಯೋ ಪಾತಾಳದಂತೆ ಗಭೀರವಾಗಿದೆ; ಆಕಾಶದಂತೆ ವಿಸ್ತಾರವಾಗಿದೆ. ನಿನ್ನೆ ಸರ್ವದೇಶಗಳನ್ನೂ ನಗುವಂತೆ ಶ್ರೀಮಂತರಾಗಿದ್ದವರು ಇಂದು ಎಲ್ಲ ನಾಡುಗಳೂ ನಗುವಂತೆ ದಟ್ಟದರಿದ್ರರಾಗಿದ್ದೇವೆ. ಆದರೂ, ಪಂಡಿತ ನೆಹರೂ ತಮ್ಮ ಭಾಷಣದಲ್ಲಿ ಹೇಳಿದಂತೆ, ಕ್ಲೈಬ್ಯಕ್ಕಿದು ಕಾಲವಲ್ಲ; ಅಧೈರ್ಯಕ್ಕಿದು ಅವಕಾಶವಲ್ಲ; ಅಸ್ಥಿರತೆಗೆ ಸಮಯವಲ್ಲ. ಗಾಂಧೀಜಿಗಾಗಿ ನಾವು ಅಳಬೇಕಾಗಿಲ್ಲ. ನಮ್ಮ ದುರದೃಷ್ಟಕ್ಕಾಗಿಯಾದರೂ ಅಳುತ್ತಾ ಕೂರುವುದು ಅವಿವೇಕವೆ. ಈಶ್ವರನ ಲೀಲೆಯಲ್ಲಿ ಇಂತಹ ಘಟನೆ ಮೊತ್ತಮೊದಲನೆಯದಲ್ಲವೆಂದೂ ತೋರುತ್ತದೆ. ಶ್ರೀಕೃಷ್ಣನು ಎಂತಹ ದುರಂತ ಸನ್ನಿವೇಶದಲ್ಲಿ ಮೃತನಾದನೆಂಬುದನ್ನು ಊಹಿಸಿಕೊಳ್ಳಿ. ಶ್ರೀ ರಾಮಚಂದ್ರನಿಗೆ ಕೊನೆ ಬಂದ ಪರಿಯನ್ನು ನೆನೆಯಿರಿ. ಶ್ರೀ ಕ್ರಿಸ್ತನು ಎಂತಹ ದುರ್ಮರಣಕ್ಕೀಡಾದನು ಎಂಬುದನ್ನು ಪರ್ಯಾಲೋಚಿಸಿ. ನಮಗೆ ಅನರ್ಥವಾಗಿ ತೋರುವುದು ಈಶ್ವರನ ಸಮಷ್ಟಿದೃಷ್ಟಿಗೆ ಅರ್ಥಪೂರ್ಣವೂ ಸಾರ್ಥಕವೂ ಆಗಿರಬಾರದೇನು? ಮಹಾತ್ಮಾರೇ ಹೇಳುತ್ತಿದ್ದರು: ‘ನನ್ನನ್ನು ಕೊಲ್ಲುವ ಸಾಮರ್ಥ್ಯ ಈಶ್ವರನೊಬ್ಬನಿಗೇ ಇದೆ’ ಎಂದು. ಕೊಂದವನು ಯಃಕಶ್ಚಿತ ಮನುಷ್ಯನಾದರೂ ಅಲ್ಲಿಯೂ ರುದ್ರನ ಹಸ್ತವನ್ನು ಕಾಣಬಹುದು. ಸರ್ವಮಂಗಲ ನಿಧಿಯಾದ ಭಗವಂತನ ಇಚ್ಛೆಯಲ್ಲಿ ಶ್ರದ್ಧೆಯಿಟ್ಟು ಸಮಾಧಾನ ತಂದುಕೊಂಡು ಮುಂದಿನ ಕಾರ್ಯಕ್ಕೆ ಸೊಂಟ ಕಟ್ಟಿ ನಿಲ್ಲಬೇಕು. ಆತ್ಮದ ಅಮೃತತ್ವದಲ್ಲಿಯೂ ಅವತಾರಗಳಲ್ಲಿಯೂ ಜನ್ಮಾಂತರ ಮತ್ತು ಪುನರ್ಜನ್ಮಗಳಲ್ಲಿಯೂ ಶ್ರದ್ಧಾಲುಗಳಾದ ನಮಗೆ ಪೂಜ್ಯ ಗಾಂಧೀಜಿಯ ದೇಹಾವಸಾನವು ಪುನರುತ್ಥಾನಕ್ಕೆ ಪ್ರಚೋದನವಾಗಬೇಕು. ಸ್ಥಿತಿಪ್ರಜ್ಞರಾದ ಗಾಂಧೀಜಿ ಮೃತರಾದರು ಎಂಬುದು ಲೋಕೋಪಚಾರದ ಮಾತು. ನಿಜವಾದ ನಿಜವಲ್ಲ. ಏಕ ದೇಹಸ್ಥವಾಗಿದ್ದ ಚೇತನ ಈಗ ಸರ್ವತ್ರವಾಗಿದೆ. ಆ ಶಕ್ತಿಗೆ ಅಂತ್ಯವಿಲ್ಲ. ಕಾಲ ಕಳೆದಂತೆಲ್ಲ ಅದು ಬಹುಗುಣಿತವಾಗುತ್ತ ಹೋಗುತ್ತದೆ. ಭಕ್ತಿಸೂತ್ರಗಳು ಹೇಳುವಂತೆ ಅಂತಹ ವಿಭೂತಿಗಳ ಆವಿರ್ಭಾವದಿಂದ ‘ಮೋದಂತೇ ಪಿತರೋ ನೃತ್ಯಂತಿ ದೇವತಾಃ ಸನಾಥಾ ಚೇಯಂ ಭೂರ್ಭವತಿ’: ‘ಪಿತೃಗಳು ನಲಿಯುತ್ತಾರೆ, ದೇವತೆಗಳು ಕುಣಿಯುತ್ತಾರೆ. ನಮ್ಮಿ ಪೃಥ್ವಿ ಸನಾಥಳಾಗುತ್ತಾಳೆ.’ ಗಾಂಧೀಜಿಯನ್ನು ನಮ್ಮಿ ಪೃಥ್ವಿ ಎಂದೆಂದಿಗೂ ಅನಾಥೆಯಲ್ಲ, ನಿತ್ಯ ಸನಾಥೆ! ಆ ಪೂಜ್ಯ ಮಹಾತ್ಮನು ನಮ್ಮನ್ನು ಕ್ಷಮಿಸಲಿ; ಆತನ ಕೃಪೆ ನಮ್ಮನ್ನು ಕೈಬಿಡದೆ ಕಾಯಲಿ; ಆ ದೇವಮಾನವನ ದಿವ್ಯಸ್ಮೃತಿ ಕಂಗೆಟ್ಟಿರುವ ನಮ್ಮ ಜನತೆಯ ಮುನ್ನಡೆಗೆ ಗಗನೋನ್ನತ ದೀಪಸ್ತಂಭವಾಗಲಿ!
ಮಹತ್ಮಾ ಗಾಂಧೀಕಿ ಜಯ್!
ಜಯ್ ಹಿಂದ್!

ನಾಥ ಪಂಥದ ನೆಲೆಯಾಗಿ ಕದ್ರಿ

ಮ.ಸು. ಕೃಷ್ಣಮೂರ್ತಿಯವರು ಹೇಳುವಂತೆ “ಬೌದ್ಧ ಧರ್ಮದ ತಾಂತ್ರಿಕ ರೂಪವೇ ಸಿದ್ಧ ಮಾರ್ಗ (ವಜ್ರಯಾನ) ವಾದರೆ ಅದರ ಭಗ್ಮಾವೇಶಷಗಳ ಮೇಲೆ ಒಡಮೂಡಿತು ನಾಥಪಂಥ. ಈ ರೀತಿ ನಾಥಪಂಥ ಬೌದ್ಧ ಸಿದ್ಧ ಪರಂಪರೆಯ ಶೈವ ರೂಪಾಂತರ” (ಕೃಷ್ಣಮೂರ್ತಿ ಮ.ಸು.;೧೯೮೨; ಮುನ್ನುಡಿ) ಅಥರ್ವವೇದ ಹಾಗೂ ತೈತ್ತೀರಿಯ ಬ್ರಾಹ್ಮಣದಲ್ಲಿ ‘ನಾಥ’ ಶಬ್ದವು ರಕ್ಷಕ, ಆಶ್ರಯದಾತ ಇತ್ಯಾದಿ ಅರ್ಥಗಳಲ್ಲಿ ಬಳಕೆಗೊಂಡಿದೆ. ಮಹಾಭಾರತದಲ್ಲಿ ಒಡೆಯ, ಪತಿ ಮುಂತಾದ ಅರ್ಥಗಳಲ್ಲಿ ಪ್ರಯೋಗವಾಗಿದೆ. ಬೋಧಿ ಚರ್ಯಾವತಾರದಲ್ಲಿ ಬುದ್ಧನನ್ನು ಕುರಿತು ಈ ಶಬ್ದವನ್ನು ಬಳಸಲಗಿದೆ. ಜೈನರು ಮತ್ತು ವೈಷ್ಣವರಲ್ಲಿ ಕೂಡ ಅತ್ಯಂತ ದೊಡ್ಡ ದೇವರು ಎಂಬರ್ಥದಲ್ಲಿ ಇದು ಬಳಕೆಯಾಗಿದೆ. ‘ಪರವರ್ತೀ’ ಕಾಲದಲ್ಲಿ ಯೋಗ ಪರವಾದ ಪಾಶುಪತ ಶೈವ ಮತವೇ ನಾಥ ಸಂಪ್ರದಾಯವಾಗಿ ರೂಪುಗೊಂಡಿತು. ಆಗ ‘ನಾಥ’ ಶಬ್ದ ‘ಶಿವ’ ಎಂಬ ಅರ್ಥದಲ್ಲಿ ಪ್ರಚಲಿತವಾಯಿತು. ರಾಜಗುಹ್ಯ ಎಂಬ ಗ್ರಂಥದ ವ್ಯಾಖ್ಯೆಯ ಪ್ರಕಾರ ಅನಾದಿ ಪರಶಿವ ವಸ್ತುವಿಗೆ ನಾಥ ಎಂಬುದು ಪರ್ಯಾಯ ನಾಮ. ಮತ್ಸ್ಯೇಂದ್ರನಾಥನ ಶಿಷ್ಯನಾದ ಗೋರಕ್ಷನಾಥನು (ಗೋರಖನಾಥ) ಈ ಪಂಥದ ಪ್ರವರ್ತಕನೆಂದು ಹೇಳಲಾಗುತ್ತದೆ. ಆದರೆ ಆತ ನಾಥಪಂಥದ ಸಂಸ್ಥಾಪಕನಲ್ಲ. ನಾಥ ಸಂಪ್ರದಾಯದ ಯೋಗಿಗಳು ರಸಾಯನವನ್ನು ಹುಡುಕಿ, ಅದರಿಂದ ತಮ್ಮ ಕಾಯವನ್ನು ಅಜರಾಮರಗೊಳಿಸಬಹು ಎಂದು ನಂಬಿದ್ದರು. ನಾಥ ಸಂಪ್ರದಾಯವನ್ನು ಸಿದ್ಧಮತ, ಸಿದ್ಧಮಾರ್ಗ ಯೋಗಮಾರ್ಗ ಅವಧೂತ ಮತ, ಅವಧೂತ ಸಂಪ್ರದಾಯ ಎಂದು ಮುಂತಾಗಿ ಕರೆಯಲಾಗುತ್ತದೆ.

ಕ್ರಿ.ಶ. ೬೦೦ ರಿಂದ ೧೨೦೦ರವರೆಗಿನ ಕಾಲಘಟ್ಟದಲ್ಲಿ ಭಾರತೀಯ ಧಾರ್ಮಿಕ ಸಂಸ್ಕೃತಿಯಲ್ಲಿ ಇದ್ದಕ್ಕಿಂದ್ದಂತೆ ತಾಂತ್ರಿಕ ಸಾಧನೆಗಳು ತಲೆದೋರಿದುವು. ವೈದಿಕ, ಅವೈದಿಕ, ವೈಶ್ಣವ, ಶೈವ, ಬೌದ್ಧ, ಜೈನ ಈ ಎಲ್ಲಾ ಧರ್ಮಗಳೂ ತಾಂತ್ರಿಕ ಸೃಷ್ಟಿ ತತ್ವ, ತಾಂತ್ರಿಕ ದೇವಮಂಡಲ, ತಾಂತ್ರಿಕ ಯಂತ್ರ ವಿಧಾನ, ತಾಂತ್ರಿಕ ಮಂತ್ರ ಸಾಧನೆ, ತಾಂತ್ರಿಕ ಆಚಾರ ವಿಧಾನ ಹಾಗೂ ಹಠಯೋಗೀ ಸಾಧನೆಗಳಿಗೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಆಶ್ರಯ ನೀಡತೊಡಗಿದುವು. ಇವೆಲ್ಲವನ್ನೂ ಅನುಲಕ್ಷಿಸಿ ಕೆಲವು ವಿದ್ವಾಂಸರು ಈ ಕಾಲಘಟ್ಟವನ್ನು ‘ತಂತ್ರಯುಗ’ ಇಲ್ಲವೆ ‘ತಾಂತ್ರಿಕ ಕಾಲ’ ಎಂದು ಕರೆದಿದ್ದಾರೆ. (ಕೃಷ್ಣಮೂರ್ತಿ ಮ.ಸು.೧೯೮೨ ಪುಟ.೮೫ – ೮೬) ಹೆಚ್ಚುಕಡಿಮೆ ಇದೇ ವೇಳೆಗೆ ಅಂದರೆ ಕ್ರಿ.ಶ. ೭ – ೮ನೇ ಶತಮಾನದ ಸಂದರ್ಭದಲ್ಲಿ ಬೌದ್ಧ ಧರ್ಮದ ಸಿದ್ಧ ಮಾರ್ಗವಾದ ‘ವಜ್ರಯಾನ’ ದಿಂದ ನಾಥಪಂಥವು ಹುಟ್ಟಿಕೊಂಡಿರಬೇಕು.

ಗೋವಿಂದ ಪೈಯವರು ಹೇಳುವ ಮಾತು ಕೂಡ ಇದಕ್ಕೆ ಪೂರಕವಾಗಿದೆ. ಅವರ ಪ್ರಕಾರ: “ನಾಥಪಂಥವಾದರೊ ಬೌದ್ಧಧರ್ಮದ ಮಹಾಯಾನ ಶಾಖೆಯ ವಜ್ರಯಾನವೆಂಬ ಪಂಗಡದಿಂದ ಸಿದ್ಧವಾಯಿತು. ಆತ ಏವ ಅದು ತಾಂತ್ರಿಕ ಶೈವಮಾರ್ಗವಾಗಿ ಪರಿಣಮಿಸುವ ಮುಂಚೆ ತಾಂತ್ರಿಕ ಬೌದ್ಧ ಮಾರ್ಗದ ಪ್ರಕಾರವಾಗಿದ್ದ ಕಾರಣ, ಅದಕ್ಕೆ ಬೌದ್ಧವೂ, ಬ್ರಾಹ್ಮಣವೂ ಅವೆರಡೂ ಧರ್ಮಗಳ ತಂತ್ರಗಳು ಹೊಂದಿಕೆಯಾಗಿವೆ. ನಾಥಪಂಥವು ಬೌದ್ಧ ಧರ್ಮದಿಂದ ಶೈವ ಧರ್ಮಕ್ಕೆ ಮಾರ್ಪಟ್ಟ ವಿಧಾನದಲ್ಲಿ ಅದು ಕೆಲಮಟ್ಟಿಗೆ ಬೌದ್ಧ ಪರಿಭಾಷೆಯನ್ನು ಬಳಸಿಕೊಂಡಿತಷ್ಟೇ ಅಲ್ಲ; ಬೌದ್ಧವೂ ಶೈವವೂ ಧರ್ಮಗಳ ಆಚಾರಗಳನ್ನೂ ಸಿದ್ಧಾಂತಗಳನ್ನೂ ಸಹಜವಾಗಿ ಹೀರಿಕೊಂಡಿತು. ಹೀಗಾಗಿ ನಾಥಪಂಥದ ಆದ್ಯ ಗುರುಗಳು ವಜ್ರಯಾನದ ದೇವತೆಗಳು ಹಾಗೂ ಗುರುಗಳೊಂದಿಗೆ ಸಮೀಕರಿಸಲ್ಪಟ್ಟರು. ತಿಬೇಟದಲ್ಲೂ, ನೇಪಾಲದಲ್ಲೂ ನಾಥಪಂಥದ ಪ್ರವರ್ತಕನಾದ ಮತ್ಸ್ಯೇಂದ್ರನಾಥನು ಮಹಾಯಾನದ ದೇವತೆಯಾದ ಅವಲೋಕಿತೇಶ್ವರನೆಂಬ ಲೋಕೇಶ್ವರನೊಡನೆ ಸಮೀಕರಿಸಲ್ಪಟ್ಟು ದೇವತೆಯಾದನು. ಹಾಗೂ ಬಂಗಾಲದಲ್ಲಿ ಆತನೂ ಆತನ ಶಿಷ್ಯನಾದ ಗೋರಕ್ಷನಾಥನೂ ಬೌದ್ಧ ಸಂತರೆಂದು ಭಾವಿಸಲ್ಪಟ್ಟರು” (ಗೋ.ಸಂ.ಸಂ.ಪು. ೬೬೨ ಮತ್ತು ಪು. ೬೭೦).

ಮೇಲೆ ನೋಡಿದಂತೆ ಗೋರಖನಾಥನಿಂದ
[1]ಪ್ರವರ್ತಿತವಾದ ಬಾರಹಪಂಥಿ ಮಾರ್ಗಗಳು (ದ್ವಾದಶ ಪಂಥಗಳು) ನಾಥ ಸಂಪ್ರದಾಯ ಎಂದು ಪ್ರಸಿದ್ಧವಾದವು. ಈ ಸಂಪ್ರದಾಯದ ಸಾಧಕರು ತಮ್ಮ ಹೆಸರಿನೊಡನೆ ‘ನಾಥ’ ಶಬ್ದವನ್ನು ಸೇರಿಸಿಕೊಳ್ಳುತ್ತಾರೆ. ಕಿವಿಯನ್ನು ಚುಚ್ಚಿಸಿಕೊಳ್ಳುವುದರಿಂದ ‘ಕನಘಟಾ’ (ಕಿವಿ ಹರುಕರು) ಎಂದೂ ‘ದರ್ಶನ್’ ಎಂಬ ಪವಿತ್ರ ಉಂಗುರವನ್ನು ಧರಿಸಿಕೊಳ್ಳುವುದರಿಂದ ‘ದರ್ಶನಿಸಾಧು’ ಎಂದೂ ಕರೆಯಲ್ಪಡುತ್ತಾರೆ. ಇವರಲ್ಲಿ ಗೃಹಸ್ಥರೂ ಇದ್ದಾರೆ; ವಿರಕ್ತರೂ ಇದ್ದಾರೆ. ಕಿವಿ ಚುಚ್ಚಿಸಿಕೊಳ್ಳದವರನ್ನು ‘ಔಘಡ್’ ಎಂದು ಕರೆಯುತ್ತಾರೆ. ನಾಥ ಸಿದ್ಧರ ಪಟ್ಟಿಯಲ್ಲಿ ಕನ್ನಡ ನಾಡಿನ ಸಂತರಾದ ರೇವಣಸಿದ್ಧ ಹಾಗೂ ಅಲ್ಲಮ ಪ್ರಭುವಿನ ಹೆಸರುಗಳೂ ಬರುತ್ತವೆ. ಗೋರಕ್ಷನಾಥನು ಕನ್ನಡ ನಾಡಿನವನಾಗಿರಬೇಕೆಂಬ ಅಭಿಪ್ರಾಯ ಒಂದಿದೆ. ಆದರೆ ಅದು ಮತ್ಸ್ಯೇಂದ್ರನಾಥನ ಶಿಷ್ಯನಾದ ಗೋರಕ್ಷನಾಥನೆ? ಅಥವಾ ಆ ಪರಂಪರೆಯಲ್ಲಿ ಬಂದ ನಂತರದ ಇನ್ನೋರ್ವ ಗೋರಕ್ಷನಾಥನೇ? ಎಂಬ ಬಗ್ಗೆ ಖಚಿತ ಆಧಾರಗಳಿಲ್ಲ. ಕನ್ನಡ ನಾಡಿನ ಶಿವಶರಣ (ಸಿದ್ಧ)ರಾದ ರೇವಣಸಿದ್ಧ ಹಾಗೂ ಅಲ್ಲಮ ಪ್ರಭುವಿನ ಸಮಕಾಲೀನನಾಗಿದ್ದು ಅವರೀರ್ವರೊಡನೆ ಸಂವಾದ ನಡೆಸಿ, ಗರ್ವಭಂಗಕ್ಕೊಳಗಾದ ಗೋರಕ್ಷನಾಥನ ಉಲ್ಲೇಖ ನಮ್ಮ ಸಾಹಿತ್ಯ ಕೃತಿಗಳಲ್ಲಿ ಸಿಗುತ್ತದೆ. ಇದು ಹೌದೆಂದಾದಲ್ಲಿ ಈ ಗೋರಕ್ಷಕನಾಥ ಮತ್ಸ್ಯೇಂದ್ರನಾಥನ ಶಿಷ್ಯನಾಗಿರಲಾರ; ಆ ಪರಂಪರೆಯಲ್ಲಿನ ನಂತರದ ಒಬ್ಬ ಯೋಗಿಯಾಗಿರಬಹುದು. ಎಂತಿದ್ದರೂ ಮತ್ಸ್ಯೇಂದ್ರನಾಥ ಮತ್ತು ಗೋರಕ್ಷನಾಥರು ಜೊತೆಗೂಡಿ ಕನ್ನಡ ನಾಡಿಗೆ ಬಂದಿದ್ದರೆಂಬುದು ಮಂಗಳೂರು – ಕದ್ರಿಗೆ ಸಂಬಂಧಿಸಿದ ಐತಿಹ್ಯ ಒಂದರಲ್ಲಿ ಉಲ್ಲೇಖಿತವಾಗಿದೆ.

ಆ ಐತಿಹ್ಯದ ಪ್ರಕಾರ: ಮತ್ಸ್ಯೇಂದ್ರ ಮತ್ತು ಗೋರಖನಾಥರು ಕೇರಳದಲ್ಲಿ ಸಂಚರಿಸುತ್ತ ಧರ್ಮ ಪ್ರಚಾರ ಮಾಡುತ್ತಿದ್ದಾಗ ಅಲ್ಲಿಯ ರಾಜಕುಮಾರಿ ಪರಿಮಳಾ ಎಂಬಾಕೆ ಅವರ ಶಿಷ್ಯೆಯಾಗಿ ಅವರನ್ನನುಸರಿಸಿ ಬರುತ್ತಾಳೆ. ಅವರು ಕೇರಳದಿಂದ ಕರಾವಳಿಯ ದಾರಿಯಲ್ಲೇ ಬಂದು ನೇತ್ರಾವತಿಯನ್ನು ದಾಟಿ ಈಗಿನ ಮಂಗಳೂರಿನ ಬೋಳಾರದ ಆಸುಪಾಸಿಗೆ ಬರುತ್ತಾರೆ. ಆ ವೇಳೆಗೆ ಗೋರಖನಾಥನು ಪರಿಮಳಾಗೆ ‘ಮಂಗಳ’ ಎಂಬುದಾಗಿ ಪುನರ್ನಾಮಕರಣ ಮಾಡಿರುತ್ತಾನೆ. ಅಲ್ಲಿಗೆ ಬರುವಾಗ ‘ಮಂಗಳಾ’ ಒಂದೆಡೆ ನಿಂತುಬಿಡುತ್ತಾಳೆ. ಮಂಗಳಾ ನೆಲೆ ನಿಂತಲ್ಲೇ ದೇವರಲ್ಲಿ ಐಕ್ಯಗೊಂಡುದರಿಂದಾಗಿ ಅಲ್ಲಿ ಕಟ್ಟಿದ ದೇವಸ್ಥಾನವು ‘ಮಂಗಳಾದೇವಿ’ ಹೆಸರಲ್ಲೂ, ಆ ಊರು ‘ಮಂಗಳೂರು’ ಹೆಸರಲ್ಲೂ ಪ್ರಸಿದ್ಧವಾಗುತ್ತವೆ. ಮತ್ಸ್ಯೇಂದ್ರನಾಥ ಮತ್ತು ಗೋರಖನಾಥರು ಮುಂದುವರೆದು ಕದರಿಗೆ ಹೋಗಿ ಅಲ್ಲಿ ಕೆಲ ಕಾಲ ತಪಶ್ಚರ್ಯದಲ್ಲಿ ತೊಡುಗುತ್ತಾರೆ. ಈ ಜಿಲ್ಲೆಯ ಇತಿಹಾಸ ಬರೆದ ಗಣಪತಿರಾವ್ ಐಗಳ್ ಮತ್ತು ಬಿ.ಎ. ಸಾಲೆತ್ತೂರ್ ಅವರುಗಳೂ ಪ್ರಸ್ತುತ ಐತಿಹ್ಯವನ್ನು ತಮ್ಮ ಕೃತಿಗಳಲ್ಲಿ ಉಲ್ಲೇಖಿಸುತ್ತಾರೆ.
ಮತ್ಸ್ಯೇಂದ್ರನಾಥ ಹಾಗೂ ಗೋರಖನಾಥರ ಕಾಲ ಸುಮಾರು ಕ್ರಿ.ಶ. ೧೦ – ೧೨ನೇ ಶತಮಾನವಾಗಿರಬೇಕೆಂದು ಈಗಾಗಲೇ ವಿದ್ವಾಂಸರು ಗುರುತಿಸಿದ್ದಾರೆ. (ವಸಂತಕುಮಾರ ತಾಳ್ತಜೆ:೧೯೮೮;ಪು. ೧೬೪) ಇವರ ಪ್ರಭಾವದಿಂದಲೇ ಕದ್ರಿಯು ನಾಥಪಂಥದ ನೆಲೆಯಾಗಿ ರೂಪುಗೊಂಡಿರಬೇಕು. ಮತ್ಸ್ಯೇಂದ್ರನಾಥನು ಕದಲಿ ದೇಶಕ್ಕೆ ಹೋಗಿ ಅಲ್ಲಿಯ ಸುಂದರಿಯರ ಮೋಹಜಾಲಕ್ಕೆ ಸಿಕ್ಕಿ ಬಿದ್ದನೆಂದೂ, ಆಗ ಗೋರಖನಾಥ ಅಲ್ಲಿಗೆ ಹೋಗಿ ತನ್ನ ಗುರುವನ್ನು ಉದ್ಧರಿಸಿದನೆಂದೂ ಕತೆಗಳಿವೆ. ಇದರಂತೆ ಮತ್ಸ್ಯೇಂದ್ರನಾಥನು ನಾರೀ ಸಾಧನೆಯುಳ್ಳ ತಂತ್ರ ಸಾಧನೆಯಲ್ಲಿ ತೊಡಗಿದ್ದಿರಬೇಕು; ಆಗ ಗೋರಖನಾಥನು ಆತನನ್ನು ಎಚ್ಚರಿಸಿ ಕರೆತಂದಿರಬೇಕು – ಎಂಬ ಅಭಿಪ್ರಾಯಕ್ಕೆ ಬರಲು ಸಾಧ್ಯವಾಗುತ್ತದೆ. (ಕೃಷ್ಣಮೂರ್ತಿ ಮ.ಸು: ೧೯೮೨ ಪು. ೧೭೫/೧೭೬) ಕೇರಳ ಕಡೆಯಿಂದ ಮತ್ಸ್ಯೇಂದ್ರನಾಥ ಮತ್ತು ಗೋರಖರ ಜತೆ ಮಂಗಳೂರಿಗೆ ಬಂದ ಪರಿಮಳಾ (ಮಂಗಳಾ)ಳ ಕಥೆಗೂ ಈ ಅಭಿಪ್ರಾಯ ಅನ್ವಯವಾಗಬಹುದು.

No comments:

Post a Comment