-->

ಸಾತನಿ

MadhuNews | Monday, June 16, 2025


ಸಾತನಿಯರನ್ನು ಚಟ್ಟದ ಶ್ರೀವೈಷ್ಣವ, ಹಾಗೂ ಸಾತ್ವಿಕ ವೈಷ್ಣವರೆಂದು ಇವರನ್ನು ಕರೆಯುತ್ತಾರೆ. ಇವರು ಬೆಂಗಳೂರು, ತುಮಕೂರು, ಮೈಸೂರು, ಹಾಸನ, ಮಂಡ್ಯ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. ಕನ್ನಡವನ್ನು ಮಾತನಾಡಿ ಕನ್ನಡ ಲಿಪಿಯನ್ನು ಇವರು ಬಳಸುತ್ತಾರೆ. ಇವರಲ್ಲಿ ಪಿತೃಪ್ರಧಾನ ಮಾತನಾಡಿ ಕನ್ನಡ ಲಿಪಿಯನ್ನು ಇವರು ಬಳಸುತ್ತಾರೆ. ಇವರಲ್ಲಿ ಪಿತೃಪ್ರಧಾನ ಕುಟುಂಬವನ್ನಾಧರಿಸಿದ ಬಳ್ಳಿಗಳಿವೆ. ಇವುಗಳ ನಡುವೆ ವಿವಾಹ ಸಂಬಂಧಗಳು ಏರ್ಪಡುತ್ತವೆ. ತಂದೆಯ ನಂತರ ಹಿರಿಯ ಮಗನು  ಮನೆಯ ವಾರಸುದಾರನಾಗುತ್ತಾನೆ. ಮದುವೆಯ ಆಚರಣೆಗಳಲ್ಲಿ ನಿಶ್ಚಿತಾರ್ಥ, ವರನ ಕಡೆಯರನ್ನು ಸ್ವಾಗತಿಸುವುದು, ಹಾರ ಬದಲಾಯಿಸುವುದು, ತಾಳಿ ಕಟ್ಟುವುದು, ಇತ್ಯಾದಿ ಮುಖ್ಯ. ಸಾತನಿಯಲ್ಲಿ ಜನನ ಸೂತಕವು ಒಂಭತ್ತು ದಿನಗಳವರೆಗಿರುತ್ತದೆ. ನಾಮಕರಣವನ್ನು ಹತ್ತನೇ ದಿನದಂದು ಮಾಡುತ್ತಾರೆ. ಋತುಮತಿಯಾದ ಹುಡುಗಿಯರಿಗೆ ಒಂಬತ್ತು ದಿನಗಳ ನಂತರ ಶುದ್ಧೀಕರಣ ಕಾರ್ಯಮಾಡುತ್ತಾರೆ. ಇವರು ಶವವನ್ನು ಸುಡುತ್ತಾರೆ, ಸಾವಿನ ಸೂತಕವು ಹನ್ನೊಂದು ದಿನಗಳವರೆಗೆ ಇರುತ್ತದೆ. ಪ್ರತಿವರ್ಷ ಹಿರಿಯರ ಪೂಜೆಯನ್ನು ಮಾಡುತ್ತಾರೆ. ಇವರ ಸಾಂಪ್ರದಾಯಿಕ ವೃತ್ತಿಯೆಂದರೆ ದೇವಸ್ಥಾನದಲ್ಲಿ ಇತರ ಸೇವೆಗಳನ್ನು ಮಾಡುವುದು. ಈಗಲೂ ಸಹ ಇವರು ತಮ್ಮ ಸಾಂಪ್ರದಾಯಿಕ ವೃತ್ತಿಯನ್ನೇ ಕೆಲವರು ಮುಂದುವರೆಸುತ್ತಿದ್ದಾರೆ. ಇವರ‍ಲ್ಲಿ ಕೆಲವರು ಆರ್ಯುವೇಧ ಔಷಧ ಪ್ರವೀಣರಾಗಿದ್ದಾರೆ. ಇವರು ಪೂಜಿಸುವ ಮುಖ್ಯ ದೇವತೆಗಳೆಂದರೆ ಕೃಷ್ಣ, ಶಿವ ಹಾಗು ವೆಂಕಟೇಶ್ವರ. ಜೀವನದ ಎಲ್ಲ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲು ಇವರದೇ ಜಾತಿಯ ವಿಶೇಷ ಪೂಜಾರಿಗಳಿರುತ್ತಾರೆ. ಇವರಲ್ಲಿ ಕೆಲವರು ವಿಗ್ರಹಗಳನ್ನು ಕೆತ್ತುವ ಕುಸುರಿಕಲೆಯಲ್ಲಿ ಪ್ರವೀಣರಿದ್ದಾರೆ. ಇವರು ಆಧುನಿಕ ಸಾಮಾಜಿಕ ವ್ಯವಸ್ಥೆಯ ಅಭಿವೃದ್ಧಿಗಳ ಸೌಲಭ್ಯ ಹಾಗೂ ಯೋಜನೆಗಳನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ತತ್ ತ್ವಮಸಿ!    

ನಿನ್ನ ಬೆನ್ನನ್ನಿಗೋ ತಟ್ಟಿ ಚಪ್ಪರಿಸಿ ಹೇಳುತ್ತಿದ್ದೇನೆ!ನನ್ನ ವಾಣಿಯ ಕೇಳಿ ನಿನಗೆ ಕೆಚ್ಚುದಿಸಲಿ; ನಿನ್ನಾತ್ಮದಲಿ ನೆಚ್ಚುದಿಸಲಿ:ಕೊರಗುತಿಹೆ ಏಕೆ? ಬ್ರಹ್ಮಾಂಡವೆಲ್ಲವೂ ನಿನಗಾಗಿರೆ, ಅಮೃತಾತ್ಮ ನೀನಾಗಿರೆ, ಕೊರಗುತಿಹೆ ಏಕೆ?ಎದ್ದೇಳು! ನಿನ್ನ ಮಹಿಮೆಯ ನೀನು ಕಾಣು! ಎದೆಯ ಮಬ್ಬಳಿಯಲಿ; ಕಾಂತಿ ಕಣ್ಣಿಗೆ ಬರಲಿ; ಶಾಂತಿಯಾನಂದಗಳ ಕಡಲು ಮೇರೆವರಿಯಲಿ.ನೋಡಲ್ಲಿ! ನಿನಗಾಗಿ ಹೊಳೆಯುತಿದೆ ತರಣಿ;ನಿನಗಾಗಿ ತರಣಿಯನು ಸುತ್ತುತಿದೆ ಧರಣಿ;ಗಾಳಿ ಬೀಸುತಿದೆ; ಬೆಂಕಿಯುರಿಯುತಿದೆ; ಚೈತ್ರಾದಿ ಮಾಸಗಳೂ ವಸಂತಾದಿ ಋತುಗಳೂ ದಿವಾರಾತ್ರಿಗಳೂ ನಿನಗಾಗಿ ಅನವರತವೂ ವಿಶ್ರಾಂತಿಯಿಲ್ಲದೆ ದುಡಿಯುತ್ತಿವೆ.ನಿನಗಾಗಿ ನಿದ್ದೆಯಿಲ್ಲದೆ ಕಾಲದೇಶಗಳೆಚ್ಚತ್ತು ಜಾಗರಣೆ ಮಾಡುತ್ತಿವೆ.ನಿನಗಾಗಿ ದೂರದಾಕಾಶದಾನಂತ್ಯದಲಿ ಕೋಟಿತಾರೆಗಳೆಲ್ಲ ಅನಾದಿಕಾಲದಿಂದಲೂ ಯಾತ್ರೆಗೈಯುತ್ತಿವೆ;

ನಿನ್ನ ಕ್ರೀಡೆಗೆ ಉದ್ಯಾನಗಳ ರಚಿಸಲೆಂದು ಜ್ಯೋತಿವತ್ಸರ ದೂರದಾಚೆಯಲಿ ಮಹಾನೀಹಾರಿಕೆಗಳೆಲ್ಲ ಸಂಮ್ಮೇಲಂಗೈದು ಕಠೋರ ತಪೋತಾಪದಲಿ ತೊಳಲಿ ಬಳಲುತ್ತಿವೆ.ಯುಗಯುಗಾಂತರಗಳು ಪೊರೆದಿಹವು ನಿನ್ನನು ತಮ್ಮ ಗಬ್ಬದಲಿ ಬೈತಿಟ್ಟು;ಎಲ್ಲ ನಕ್ಷತ್ರಗಳ ಅಗ್ನಿಸ್ಪರ್ಶವೂ ನಿನಗಾಗಿದೆ;
ಅಗ್ನಿರೂಪಿಣಿ ಪೃಥ್ವೀಮಾತೆ ಸುಂದರ ವಸುಂಧರೆಯಾಗಿಹಳು ನಿನಗಾಗಿ;ಜಡದಿಂದ ಚೈತನ್ಯ ಚಿಮ್ಮಿದುದು ನಿನಗಾಗಿ;ಧರೆಯಾದಿಕಾಲದಲಿ ಬೆಂಕಿಯಾವಿಗಳಿಂದ ನೀರು ನೆಲ ಗಾಳಿಗಳು ಮೂಡಿದುದು ನಿನಗಾಗಿ;ಸಸ್ಯಗಳು ಹುಟ್ಟಿದುದು ನಿನಗಾಗಿ;ವ್ಯಾಳಾದಿ ಮಹಾಪ್ರಾಣಿಗಳು ಲಕ್ಷಾಂತರ ವರ್ಷ ಪರ್ಯಂತ ಪೃಥ್ವಿಯನ್ನಾಳಿದುದೂ ನಿನಗಾಗಿ!ನಿನ್ನನವುಗಳು ಮೇವಿನಲಿ ಮೆಲುಕಿಟ್ಟು ಕಾಪಾಡಿವೆ!ಎನಿತು ಪೀಠಿಕೆಗಳಾಗಿವೆ ನಿನಗೆ! ಎನಿತು ನಾಂದಿಗಳಾಗಿವೆ ನಿನಗೆ?ಎದ್ದೇಳು! ನಿನ್ನ ಮಹಿಮೆಯ ನೀನು ಕಾಣು! ತತ್ ತ್ವಮಸಿ! ತತ್ ತ್ವಮಸಿ! ತತ್ ತ್ವಮಸಿ!

ಸತ್ಯಾಗ್ರಹಿ

ಸ್ವಾತಂತ್ರ್ಯ ಸಂಗ್ರಾಮದಲಿ ತನ್ನ ಜೀವವನು
ಲೆಕ್ಕಿಸದೆ ಹೋರುವನು ವೀರ ಸತ್ಯಾಗ್ರಹಿ;
ನೊಂದರೂ ಬೆಂದರೂ ಸತ್ಯವನು ಕೈಬಿಡದೆ
ಜವನ ದಾಡೆಯ ನುಗ್ಗುವವನು ಸತ್ಯಾಗ್ರಹಿ!
ಆತ್ಮಶಕ್ತಿಯ ಬಲದಿ ಮಿಂಚುಗಳ ಸಂತೈಸಿ
ಸಿಡಿಲುಗಳ ಬೋಳೈಸುವವನು ಸತ್ಯಾಗ್ರಹಿ;
ಹೊಡೆಯದೆಯೆ ತಡೆಯುವನು ವೀರ ಸತ್ಯಾಗ್ರಹಿ!
ಗೆಲ್ಲದೆಯೆ ಗೆಲ್ಲುವನು ವೀರ ಸತ್ಯಾಗ್ರಹಿ!
ಸಿಡಿಗುಂಡಿನೆದುರಿನಲಿ, ಕೂರಸಿಗಳೆದುರಿನಲಿ,
ಕಬ್ಬಿಣದ ಸಂಕೋಲೆಗಳ ಕರಿಯ ತೆಕ್ಕೆಯಲಿ,
ಜೈಲಿನಲಿ, ಅಧಿಕಾರಿಗಳ ಕ್ರೂರ ದರ್ಪದಲಿ,
ಹರಿವೆದೆಯ ನೆತ್ತರಿನ ಹೊಳೆಯಲ್ಲಿ, ಮುಂದಿಟ್ಟ
ಹಜ್ಜೆ ಹಿಂದೆಗೆಯದಳಿವವನು ಸತ್ಯಾಗ್ರಹಿ!
ದೇಶಮಾತೆಯ ಸುಖಕೆ ತನ್ನ ಸುಖವನು ಬೇಳ್ವ,
ದೇಶದ ಬದುಕಿಗಾಗಿ ತನ್ನ ಬದುಕನು ಸೀಳ್ವ,
ಹಿಂಸೆಯನಹಿಂಸೆಯಿಂ ಹಿಂಸಿಸದೆ ಕೊಲ್ವ,
ಸಮರ ಲೋಲನೆ ನಮ್ಮ ವೀರ ಸತ್ಯಾಗ್ರಹಿ!
ಪ್ರೇಮಾಗ್ನಿಯಿಂ ದ್ವೇಷದಗ್ನಿಯನು ಸುಟ್ಟು,
ದೇಹಶಕ್ತಿಯನಾತ್ಮಶಕ್ತಿಯಿಂ ಗೆದ್ದು,
ಬಗೆಯಲ್ಲಿ, ಬಾಯಲ್ಲಿ, ಕೈಯಲ್ಲಿ ಹಿಂಸೆಯನು
ಬಿಟ್ಟು ಹೋರುವ ಭಟನು ವೀರ ಸತ್ಯಾಗ್ರಹಿ!
ಹೇಳದೆಯೆ ಕೇಳದೆಯೆ ದಳಪತಿಯು ನುಡಿದಂತೆ
ಮಾಡುವವನಾವನೋ ಅವನೆ ಸತ್ಯಾಗ್ರಹಿ;
ಕೋಪಿಸದೆ ಶತ್ರುವಿನ ರಭಸವಹ ಕೋಪವನು
ಸಹನೆಯಿಂ ಗೆಲ್ಲುವ ಪರಾಕ್ರಮಿಯು; ಬಲವಿರಲು
ಬಲುಮೆಯನು ತೋರದನು ದಿವ್ಯ ಸತ್ಯಾಗ್ರಹಿ!
ತನ್ನ ತಾಯಿಯ ಉಪ್ಪು ತನ್ನ ವಶದಲ್ಲಿರಲು
ಇತರರನು ನೋಯಿಸದೆ ತನ್ನ ಜೀವವ ತೆತ್ತು
ಕಾಯುವವನಾವನೋ ಅವನೆ ಸತ್ಯಾಗ್ರಹಿ!
ಎಂದಿಗೂ ಆಣೆಯಿಡದವನು ಸತ್ಯಾಗ್ರಹಿ!
ಎಂದಿಗೂ ಶಾಪಕೊಡದವನು ಸತ್ಯಾಗ್ರಹಿ!
ರಾಕ್ಷಸೀ ಬಲದಿಂದ ನಮ್ಮನಾಳುವ ಜನರ
ಹಳವಿಗೆಗೆ ಬಾಗದವನವನೆ ಸತ್ಯಾಗ್ರಹಿ!
ತನ್ನ ಗೌರವ ಕೆಡದ ರೀತಿಯಲಿ ನಡೆವವನು,
ತನ್ನ ಜಾಗಕೆ ತಾನೆ ಬಲು ಹೆಮ್ಮೆ ಪಡದವನು,
ಮರೆಯದೆಯೆ ಹಡೆದ ಮಾತೆಯ ಸೇವೆಯನು ಮಾಡಿ
ಮೌನದಿಂ ಮಡಿವವನು ಧನ್ಯ ಸತ್ಯಾಗ್ರಹಿ!
ಕಲಿಯುಗದ ಪ್ರಚ್ಛನ್ನ ಕಲ್ಕಿ ಸತ್ಯಾಗ್ರಹಿ!

ಪ್ರಯೋಜನ

ತಂಬಿಗೆ ಕೇಳಿತು ಬಿಂದಿಗೆಯ:
“ಓ ನೀರು ತುಂಬಿದ ಬಿಂದಿಗೆ,
ಸಹರಾ ಮರುಭೂಮಿಗೆ ಹೊರಟಿದ್ದೀಯಾ?”
ದೊಡ್ಡ ಬಿಂದಿಗೆ ಹೇಳಿತು ಹಿಗ್ಗಿ:
“ಹೌದು, ಮಾಡಲದನು ಫಲವತ್ತಾಗಿ!”
ಪುಟ್ಟ ತಂಬಿಗೆ ತನ್ನ ಸಂದೇಹವನು
ಒರೆಯಿತಿಂತು:
“ಹೇಳುತ್ತಾರೆ,
ಅದರ ವಿಸ್ತೀರ್ಣ ಸಾವಿರಾರು ಚದರಮೈಲಿಗಳಂತೆ;
ಅಲ್ಲಿ ಮಳೆಯಿಲ್ಲ; ಬರಿಯ ಉರಿಬಿಸಿಲಂತೆ;
ಹಸುರು ಎಸಳಿಲ್ಲದಿಹ ಬರಿಯ ಮರಳುಗಾಡಂತೆ!
ಒಂದಲ್ಲ ಎರಡಲ್ಲ
ನೂರುಸಾಗರಗಳೆ ಅದರ ಮೇಲುಕ್ಕಿದರೂ
ಇಂಗಿಹೋಗುವ ಬಡಬ – ಬೇಗೆ ಅದಕ್ಕಂತೆ!
ನೀನು
ಒಂದೆರಡು ಕೊಡ ನೀರು ತುಂಬಿರುವ ಬಿಂದಿಗೆ,
ನನಗೆನಿತು ಹಿರಿಯನಾದರೂ,
ಕ್ಷಮಿಸು,
ಕೋಟಿಯೋಜನದಗಲ ಮರುಭೂಮಿಯನು
ಮಾಡಬಲ್ಲೆಯ ಹೇಳು ಫಲವತ್ತಾಗಿ?
ಹಿರಿಯ ಆ ವ್ಯರ್ಥಸಾಹಸವನುಳಿದು,
ನಮ್ಮ ಈ ಚಿಕ್ಕ ತೋಟದಲ್ಲಿಯೆ ನಿಂತು
ಈ ಸಣ್ಣ ಗಿಡಗಳಿಗೆ ನೀರೆರೆದರೆ
ಅಲ್ಪವಾದರೂ, ಅಣ್ಣಾ, ಸಫಲವಲ್ತೆ?”
ತಂಬಿಗೆಯ ನುಡಿಗೇಳ್ದು
ಹಿತ್ತಳೆಯ ಬಿಂದಿಗೆ ರಬ್ಬರಿನಂತುಬ್ಬಿ
ನಕ್ಕಿತು ತಿರಸ್ಕರಿಸಿ:
“ಬೆಪ್ಪೆ,
ಈ ಕೊಂಪೆಯಲಿ ನನ್ನ ಸಾಹಸವ ನೋಡುವವರಾರು?
ಅದನು ನೋಡಲು ನೆರೆಯಲಾದರೂ ನಾಲ್ಕುಜನ ಇಹರೆ ಇಲ್ಲಿ?
ಇಲ್ಲಿರುವ ನಿನ್ನ ಪತ್ರಿಕೆಯೊ ಮೂರು ಕಾಸಿನದು!
ಅದಕಿರುವುದೊಂದೆ ಹಾಳೆ!
ಅದಕೆ ಚಂದಾದಾರರೂ
ಬೆರಳೆ ಮಿಗುವುವು ಎಣಿಸೆ!
ಸಹರಾಕೆ ನೀರೆರೆಯೆ ನಾ ಹೊರಟರೆ
ಸುದ್ದಿ ಹಬ್ಬುವುದು ದೇಶ ದೇಶದಲಿ!
ಬೇರೆ ಬೇರೆಯ ಭಾಷೆಯ ಮಹಾ ಪತ್ರಿಕೆಗಳಲಿ,
(ನಿನ್ನ ಮೂರುಕಾಸಿನ ಒಂದೆ ಹಾಳೆಯ ಪತ್ರಿಕೆಗಳಲ್ಲ!)
ಪುಟ ಪುಟಗಳನೆ ತುಂಬುವುವು ನನ್ನ ಚಿತ್ರಗಳೆ!
ಬರೆವರು ಮಹಾಕವಿಗಳೆನ್ನನೆಯೆ ಹಾಡಿ!
ಹೋಲಿಸುವರೆನ್ನನು ಭಗೀರಥಗೆ ಎಣೆಮಾಡಿ!” –
“ಆದರೇನು ಪ್ರಯೋಜನ, ಅಣ್ಣಾ?
ನಿನ್ನೆರಡು ಕೊಡ ನೀರಿನಲಿ ಫಲವತ್ತಾಗುವುದೆ ಸ ಹ ರಾ?” –
“ಅದು ಫಲವತ್ತಾದರೆಷ್ಟು? ಆಗದಿದ್ದರೆಷ್ಟು?
ನನ್ನ ಹೆಸರಾಗುವುದು ಲೋಕಪ್ರಸಿದ್ಧ!
ಅದಕಿಂತಲೂ ಯಾವುದಯ್ಯಾ – ‘ಪ್ರಯೋಜನ’?”

 ಡಾ. ಉಪಾಧ್ಯೆ

ಸರ್ವರಿಗೂ ನಮಸ್ಕಾರ:
ಡಾ. ನಾಯಕರು ಡಾ. ಉಪಾಧ್ಯೆಯವರ ಅಭಿನಂದನ ಮತ್ತು ಬೀಳ್ಕೊಡುಗೆಯ ಸಮಾರಂಭವನ್ನು ಇಟ್ಟುಕೊಂಡಿದ್ದೇವೆ, ಅದಕ್ಕೆ ನೀವು ಅಧ್ಯಕ್ಷರಾಗಬೇಕೆಂದು ಕೇಳಿಕೊಳ್ಳಲು ಬಂದಾಗ ನಾನು ಅವರು ಈ ಲೇವಾದೇವಿ ಬುದ್ಧಿಯನ್ನು ಇಟ್ಟುಕೊಳ್ಳುತ್ತಾರೆಂದು ಭಾವಿಸಿರಲಿಲ್ಲ. ಅವರು ಕೇಳಿಕೊಂಡೊಡನೆಯೆ ನಾನು ಒಪ್ಪಿದೆ ಎಂದರು. ಒಂದು ದೃಷ್ಟಿಯಿಂದ ಹೌದು. ಇನ್ನೊಂದು ದೃಷ್ಟಿಯಿಂದ ನಾನು ಹಿಂಜರಿದೆ.
ಡಾ. ಉಪಾಧ್ಯೆ ಅವರ ವಿದ್ವತ್ತಿನ ಕ್ಷೇತ್ರದಲ್ಲಿ-ಸಂಪಾದನ, ಸಂಶೋಧನ, ಪಾಂಡಿತ್ಯ -ಈ ಕ್ಷೇತ್ರದಲ್ಲಿ ಅವರು ಸಮುದ್ರಪ್ರಾಯರು. ನಾನು ಸಮುದ್ರ ಎಂದು ಹೇಳುವ ಮಾತಿನ ಅರ್ಥ ನಿಮಗೆ ಈ ಹಿಂದೆ ಮಾತನಾಡಿದವರ ವಿಷಯಗಳನ್ನು ನೀವು ಗ್ರಹಿಸಿದ್ದ ಪಕ್ಷದಲ್ಲಿ ಗೊತ್ತಾಗುತ್ತದೆ. ಆ ಸಮುದ್ರದಲ್ಲಿ ಮುತ್ತು ರತ್ನಗಳಿಗಾಗಿ ಮುಳುಗಿದವರಿದ್ದಾರೆ. ಆ ಸಮುದ್ರದ ವಿಸ್ತಾರವನ್ನು ಕಾಣಲು ಅದನ್ನು ಪರ್ಯಟನ ಮಾಡಿದವರಿದ್ದಾರೆ. ಅದರೆ ನಾನು ಅದರ ಮಳಲು ದಂಡೆಯ ಮೇಲೆ ನಿಂತು ಆ ಸಮುದ್ರದ ವಿಸ್ತಾರವನ್ನೂ ತರಂಗಗಳ ರಮಣೀಯತೆಯನ್ನೂ ಅದರ ಘರ್ಜನೆಗಳನ್ನೂ ನೋಡಿ, ಕೇಳಿ, ಆನಂದಿಸಬಲ್ಲೆನೆ ಹೊರತು ಅದಕ್ಕೆ ಪ್ರವೇಶವಾಗಲಿ, ಅದನ್ನು ಪರ್ಯಟನ ಮಾಡುವುದಾಗಲಿ ಸಾಧ್ಯವಿಲ್ಲದ ಮಾತು. ಇಂತಹ ಮಹದ್ ವ್ಯಕ್ತಿಯನ್ನು ನಾಲ್ಕು ಔಪಚಾರಿಕ ಮಾತುಗಳಿಂದ ಅಭಿನಂದಿಸಿ ಬೀಳ್ಕೊಳ್ಳಬಹುದು. ಆದರೆ ಅದು ಸಾಕೆ? ಎಂಬ ಭಾವನೆ ಬಂದಾಗ ನನಗೆ ಮನಸ್ಸು ಹಿಂಜರಿಯುತ್ತದೆ.

ಡಾ. ಉಪಾಧ್ಯೆ ಅವರು ಶ್ರವಣಬೆಳಗೊಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾಗ, ಅವರನ್ನು ಆದಿನಾಥ ನೇಮಿನಾಥ ಉಪಾಧ್ಯೆ ಆದ್ದರಿಂದ ಆನೇ ಉಪಾಧ್ಯೆ-ಇವರು ಆನೆಯಂತೆ ಗಜಪ್ರಾಯರು ಎಂದು ಯಾರೊ ಸ್ವಾಗತ ಸಮಯದಲ್ಲೋ ಏನೋ ಹೇಳಿದರಂತೆ, ಅದಕ್ಕೆ ಉತ್ತರವಾಗಿ ಉಪಾಧ್ಯೆಯವರು ಮಾತನಾಡುತ್ತಾ “ಕನ್ನಡದಲ್ಲಿ ನಾನು ಆನೇ ಹೌದು ಆದರೆ ಇಂಗ್ಲಿಷಿನಲ್ಲಿ (A.N. Upadhye-ANU) ಅಣು ಎಂದು ಅದಕ್ಕೆ ಉತ್ತರ ಕೊಟ್ಟರು. ವಾಸ್ತವವಾಗಿ ಅವರು ಆನೆಯೂ ಹೌದು, ಅಣುವೂ ಹೌದು. ವಿದ್ವತ್ತಿನಲ್ಲಿ ಅವರು ಆನೆ – ವಿನಯದಲ್ಲಿ ಅವರು ಅಣು.

ನನಗೂ ಡಾ. ಉಪಾಧ್ಯೆಯವರಿಗೂ ಯಾವ ಸಂಬಂಧವೂ ಇರಲಿಲ್ಲ ಎಂದು ಭಾವಿಸುತ್ತೇನೆ. ಆದರೆ ದೈವವಶದಿಂದ ಒಂದು ಘಟನೆ ನಡೆಯಿತು. ಆ ಸಂದರ್ಭದಲ್ಲಿ ಉಪಾಧ್ಯೆಯವರು ಮೈಸೂರಿನಿಂದ ದೆಹಲಿಗೆ ನನ್ನನ್ನು ಎಳೆದುಕೊಂಡು ಹೋಗುವ ಸಾಹಸ ಮಾಡಿದರು. ಆಗಲೆ ನಾನು ಉಪಾಧ್ಯೆಯವರನ್ನು ಮೊದಲು ಸಂಧಿಸಿದ್ದು. ಉಪಾಧ್ಯೆಯವರ ಯಶಸ್ಸಿನ ವಿಚಾರವಾಗಿ ಕೇಳಿದ್ದೆ. ಅವರ ವಿಚಾರವಾಗಿ ನಿಜವಾಗಿಯೂ ನನಗೆ ತುಂಬಾ ಗೌರವವಿತ್ತು. ಆದರೂ ವ್ಯಕ್ತಿಶಃ ನಾನವರನ್ನು ನೋಡಿರಲಿಲ್ಲ. ಜ್ಞಾನಪೀಠ ಪ್ರಶಸ್ತಿಯನ್ನು ದೆಹಲಿಗೆ ಬಂದು ಸ್ವೀಕರಿಸಬೇಕು ಎಂದು ಕೇಳಿದಾಗ ನಾನು-ನನ್ನ ಸ್ವಭಾವ ಸ್ವಲ್ಪ ಸ್ಥಾವರ ಪ್ರಕೃತಿ ಎಂದು ಹೇಳುತ್ತೇನೆ-ನಾನು ದೆಹಲಿಗೆ ಹೋಗಲು ಒಪ್ಪಲಿಲ್ಲ. ಬೇಕಾದರೆ ಸಮಾರಂಭವನ್ನು ಮಾಡಿಯೆ ಮಾಡಬೇಕೆಂದರೆ ಮೈಸೂರಿನಲ್ಲಿಯೆ ಮಾಡಿ ಎಂದೆ. ನನಗೆ ಮೊತ್ತ ಮೊದಲ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಾಗಲೂ ನಾನು ದೆಹಲಿಗೆ ಹೋಗಲಿಲ್ಲ. ನನಗೆ ಪದ್ಮಭೂಷಣ ಪ್ರಶಸ್ತಿಯನ್ನು ಕೊಟ್ಟಾಗಲೂ ನಾನು ದೆಹಲಿಗೆ ಹೋಗಲಿಲ್ಲ. ಬಹುಶಃ ಜ್ಞಾನಪೀಠ ಪ್ರಶಸ್ತಿಗೂ ದೆಹಲಿಗೆ ಹೋಗುವುದಿಲ್ಲ ಎಂದುಕೊಂಡಿದ್ದೆ. ಆದರೆ ಅವರು ದೊಡ್ಡ ಆನೆಯನ್ನೆ ಮೈಸೂರಿಗೆ ಕಳುಹಿಸಿದರು, ನನ್ನನ್ನು ಹಿಡಿದೆತ್ತಿ ತರಲು! ಅದರ ಕಥೆ ವಿವರದಲ್ಲಿ ಬಹಳ ಸ್ವಾರಸ್ಯವಾಗಿದೆ, ಆದರೆ ಇಲ್ಲಿ ಅದು ಅನಾವಶ್ಯಕ. ಅಂತೂ ಉಪಾಧ್ಯೆಯವರು ಬಂದು ಎರಡುದಿನ ನನ್ನನ್ನು ಸೋಲಿಸಿ, ದೆಹಲಿಗೆ ವಿಮಾನದಲ್ಲಿ ಕರೆದುಕೊಂಡು ಹೋಗಿ ಮತ್ತೆ ಕರೆದುಕೊಂಡು ಬಂದು ಬಿಟ್ಟರು.

ಅವರ ಈ ಜೈನಾಲಜಿಯ ಪ್ರಸ್ತಾಪ ನಾನು ವೈಸ್ ಛಾನ್ಸಲರ್ ಆಗಿದ್ದಾಗಲೆ ಸ್ವಲ್ಪಮಟ್ಟಿಗೆ ಬಂದಿತ್ತು. ಅದರ ವಿಚಾರದಲ್ಲಿ ಆಗ ಅವರ ನನ್ನ ಭೇಟಿಯೇನು ಆಗಲಿಲ್ಲ. ಆದರೆ, ಅವರು ಈ ಜೈನಶಾಸ್ತ್ರ ಪೀಠದ ಪ್ರಧಾನ ಅಧ್ಯಾಪಕರಾಗಿ ಬಂದಮೇಲೆ ನನ್ನ ಅವರ ಪರಿಚಯ ಬೇರೆ ರೀತಿಯಲ್ಲಿ ನಡೆಯತೊಡಗಿತು. ಅದು ನಾನೂ ಮಾನಸಗಂಗೋತ್ರಿಯಲ್ಲಿ ಬೆಳಗಿನ ಸಂಚಾರ ಮಾಡುವುದು, ಅವರೂ ಸಹ ಮಾಡುವರು. ಅವರು ಅಲ್ಲೆಲ್ಲೋ ದೂರದಲ್ಲಿ ಬರುವರು. ಅವರನ್ನು ಎಷ್ಟೇ ದೂರದಿಂದಲೂ ನಾನು ಕಂಡುಹಿಡಿಯಲು ಸಾಧ್ಯ. ಅವರ ರೀತಿಯಲ್ಲಿ ಪಂಚೆಯನ್ನು ಮೈಸೂರಿನಲ್ಲಿ ಬೇರಾರೂ ಉಡುವುದಿಲ್ಲ. ಅವರು ದೂರದಿಂದ ಬರುತ್ತಿರುವಾಗಲೆ, ನಾನು ಬರುವುದನ್ನು ಕಂಡು ನಾನು ಬಂದೊಡನೆಯೆ ‘ನಮಸ್ಕಾರ್ರೀ’ ಎಂದು ಕೈಮುಗಿದು ಸ್ವಾಗತಿಸುವರು. ಅವರು ಪ್ರತಿಯೊಂದಕ್ಕೂ ‘ರೀ’ ಸೇರಿಸಿಯೇ ಸೇರಿಸುತ್ತಾರೆ. ಹಾಗೆಯೆ ಲೋಕಾಭಿರಾಮವಾಗಿ ಎಷ್ಟೋ ಹೊತ್ತು ಮಾತನಾಡಿಕೊಂಡು ಸಂಚರಿಸಿ ಬರುತ್ತೇವೆ ನಾವು.

ಇಂಥವರನ್ನು ಮೈಸೂರು ವಿಶ್ವವಿದ್ಯಾನಿಲಯ ಕರೆಸಿ, ನಾಲ್ಕೂವರೆ ವರ್ಷ ಇಲ್ಲಿರಿಸಿಕೊಂಡು, ಇಂಥ ಅದ್ಭುತವಾದಂಥ ಒಂದು ಪೀಠವನ್ನು ಸಂಸ್ಥಾಪಿಸಿ, ಈಗ ಅವರನ್ನು ಬೀಳ್ಕೊಡುತ್ತಿದ್ದಾರೆ. ಹಿಂದಿನ ಉಪನ್ಯಾಸಕರು ಹೇಳಿದ ಮಾತುಗಳಿಂದ ನೀವು ಅವರ ಹಿರಿಮೆ ಏನು ಅನ್ನುವುದನ್ನು ಅರಿತಿದ್ದೀರಿ. ನಾನು ಹೇಳಿದ ಹಾಗೆ ಅವರ ದೊಡ್ಡ ಸಮುದ್ರದಂತೆ ಅಥವಾ ಮಹಾಪರ್ವತದಂತೆ. ಅದನ್ನು ನಾವು ಸ್ವಲ್ಪಮಟ್ಟಿಗೆ ಪ್ರದಕ್ಷಣೆ ಮಾಡಬಹುದೇ ಹೊರತು ಅದನ್ನು ಹತ್ತಿ ಆ ನೆತ್ತಿಯಲ್ಲಿ ಪರವಾಸಿಗಳಾಗಲೂ ಕೂಡ ಸಾಧ್ಯವಿಲ್ಲ. ಆ ಮಟ್ಟದ ವ್ಯಕ್ತಿ ಅವರು. ಬಹುಶಃ ಅವರು ತಮಗೊದಗಿದ ಆ ಸನ್ಮಾನ ಪ್ರಶಸ್ತಿಗಳು, ಬಹುಮಾನಗಳು ಈ ವಿಚಾರವಾಗಿ ತುಂಬಾ ವಿನಯದಿಂದ ಕೃತಜ್ಞತೆಯಿಂದ ಹೇಳಿಕೊಂಡಿದ್ದಾರೆ. ವಾಸ್ತವವಾಗಿ ಅಂಥವರಿಗೆ ಈ ಬಹುಮಾನ ಪ್ರಶಸ್ತಿಗಳೆಲ್ಲಾ ಅವರ ದೃಷ್ಟಿಯಿಂದ ಅಲ್ಲದೇ ಇದ್ದರೂ ನಮ್ಮ ದೃಷ್ಟಿಯಿಂದ ಇವು ಬಹಳ ಕೆಳಗಿನವು ಎಂದೇ ಹೇಳಬೇಕಾಗಿ ಬರುತ್ತದೆ. ಪಂಪ ತನ್ನ ಆದಿಪುರಾಣದಲ್ಲಿ ಆಧ್ಯಾತ್ಮಿಕ ಮಹೋನ್ನತಿಯನ್ನು ಮುಟ್ಟುವ ಒಂದು ಪದ್ಯ ರಚಿಸಿದ್ದಾನೆ. ಒಂದು ಪದ್ಯ ‘ಕವಿತೆಯೊಳಾಸೆಗೆಯ್ವ’ ಎಂದು ಆರಂಭವಾಗುತ್ತದೆ. ಆದರೆ, ಅದಕ್ಕಿಂತಲೂ ಮಹತ್ತರವಾದ ಮತ್ತೊಂದು ಪದ್ಯವಿದೆ. ಅದು: ಅಮರೇಂದ್ರೋನ್ನತಿ ಖೇಚೆರೇಂದ್ರ ವಿಭವಂ ಭೋಗೀಂದ್ರ, ಭೋಗಂ ಮಹೇಂದ್ರ ಮಹೈಶ್ವರ್ಯಂ ಇವೆಲ್ಲಮಧ್ರುವಂ ಇವಂ ಬೇಳ್ವಂತು ಬೆಳ್ಳಲ್ಲೆನ್ ಉತ್ತಮ ದೀಕ್ಷಾವಿಧಿಯುಂ ಸಮಾಧಿಮರಣಂ ಕರ್ಮಕ್ಷಯಂ ಬೋಧಿಲಾಭಮಮೋಘಂದೊರೆಕೊಳ್ವುದಕ್ಕೆಮಗೆ ಮುಕ್ತಿ ಶ್ರೀ ಮನೋವಲ್ಲಭಾ.

ಇದು ಸಾಧಾರಣ ಚೇತನಗಳಿಂದ ನಡೆಯುವ ಪ್ರಾರ್ಥನೆಯಲ್ಲ. ಇಂಥ ಪ್ರಾರ್ಥನೆ ಕರ್ಮಯೋಗಿಗಳಂತೆ ದುಡಿದ ಉಪಾಧ್ಯೆಯವರಂಥವರಿಗೆ ಮಾತ್ರ ಸಾಧ್ಯ. ಅವರನ್ನು ನಾವೆಲ್ಲರೂ ವಿದ್ವಾಂಸರು ಎನ್ನುವ ಭಾವದಿಂದ ಕಾಣುತ್ತಿದ್ದೇವೆ. ಆದರೆ ಅದರ ಹಿಂದೆ ಅವರ ವ್ಯಕ್ತಿತ್ವದಲ್ಲಿರುವ ಒಂದು ಮಹತ್ತಾದ ಆಧ್ಯಾತ್ಮಿಕ ಕ್ರಿಯೆ, ಅದು ಬಹುಶಃ ಹೊರಗಿನವರಿಗೆ ಅಗೋಚರ. ಆ ದೃಷ್ಟಿಯಿಂದಲೆ ನಾನು ಅವರನ್ನು ಸಮುದ್ರಕ್ಕೆ ಹೋಲಿಸಿದ್ದು. ಆ ಗಾಂಭೀರ್ಯ, ಆ ಗಭೀರತೆ ಆ ವಿಸ್ತಾರ ಇವುಗಳೆಲ್ಲವನ್ನೂ ಅವರಲ್ಲಿ ಕಾಣುತ್ತೇವೆ. ಅವರು ವಿದ್ವತ್ತಿನಲ್ಲಿ ಆನೆಯಾದರೂ ವಿನಯದಲ್ಲಿ ಅಣು. ಆದ್ದರಿಂದಲೆ ಸಾಮಾನ್ಯ ಜನಗಳಿಗೆ ಅವರ ವಿಭೂತಿತೇಜಸ್ಸು ಗೋಚರಿಸದೆ ಇರಬಹುದು. ಆದರೆ, ನಾನು ಆ ಪಕ್ಷದಲ್ಲಿ ಆ ಭಾಗದಿಂದ ಅವರನ್ನು ತುಂಬಾ ಗೌರವಿಸುತ್ತೇನೆ.

ನನ್ನನ್ನು ಆಶೀರ್ವದಿಸಿ ಎಂದು ಕೇಳಿಕೊಂಡರು ಅವರು. ಅದು ಹಾಗಲ್ಲ, ಅವರೇ ಆಶೀರ್ವದಿಸಬೇಕು ನನ್ನನ್ನು.

ಅವರು ಮೈಸೂರಿನಿಂದ ಕೊಲ್ಲಾಪುರಕ್ಕೆ ಹೋಗುತ್ತಿದ್ದಾರೆ. ಆದರೆ ಅವರೆ ಹೇಳಿದಂತೆ ಸಾಧ್ಯವಿರುವಾಗಲೆಲ್ಲಾ ನಮ್ಮನ್ನು ನೆನೆದು, ನಮ್ಮಲ್ಲಿಗೆ ಬಂದು, ಮೈಸೂರು ವಿಶ್ವವಿದ್ಯಾನಿಲಯದ ಒಂದು ಸೇವೆಗೆ, ಕೀರ್ತಿಗೆ, ಅವರು ಯಾವಾಗಲೂ ಕಂಕಣಬದ್ಧರಾಗಿರುತ್ತಾರೆ ಎನ್ನುವ ಅರ್ಥದಲ್ಲಿ ಅವರು ಮಾತನಾಡಿದರು. ಅವರನ್ನು ಬೀಳ್ಕೊಳ್ಳುವ ಸಮಾರಂಭಕ್ಕೆ ನನ್ನನ್ನು ಅಧ್ಯಕ್ಷನನ್ನಾಗಿ ಕರೆದು, ಅವರ ವಿಚಾರವಾದ ಈ ಅನೇಕ ಭಾಷಣಗಳನ್ನು ಕೇಳಿ, ಅವರ ಮಹತ್ತನ್ನು ಇನ್ನೂ ಹೆಚ್ಚಾಗಿ ಅರಿಯುವುದಕ್ಕೆ ಅವಕಾಶ ಮಾಡಿಕೊಟ್ಟುದಕ್ಕಾಗಿ ಡಾ. ನಾಯಕರನ್ನು ನಾನು ವಂದಿಸುತ್ತೇನೆ.

 ಒಂದು ಅಧ್ಯಯನ

ಕೆರೆಯ ನೀರು ಇಂದಿಗೂ ಬೇಸಾಯದ ಜೀವನಾಡಿ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಗಾದೆಯಿದೆ. ರೈತರ ಬದುಕು ಇದರೊಂದಿಗೆ ಹೆಣೆದುಕೊಂಡಿದೆ. ಕೆರೆಯನ್ನು ಕಟ್ಟುವ ಸ್ಥಳವನ್ನು ನಮ್ಮ ಪ್ರಾಚೀನರೇ ಆರಿಸಿಕೊಳ್ಳುತ್ತಿದ್ದರು. ಕೆರೆ ಇಲ್ಲದ ಗ್ರಾಮವಿಲ್ಲ ಎನ್ನಬಹುದು. ಕೆರೆಯ ಇತಿಹಾಸವು ಪ್ರಾಚೀನವಾಗಿರಬಹುದು. ಇದರ ಬಗ್ಗೆ ದಂತಕಥೆಗಳೂ ಸಹ ಹುಟ್ಟಿಕೊಂಡಿವೆ.
ಕೆರೆಯ ನೀರು ವ್ಯರ್ಥವಾಗಿ ಎಂದಿಗೂ ಪೋಲಾಗಕೂಡದು ಎಲ್ಲರಿಗೂ ಸಮನಾಗಿ ಹಂಚಿಕೆಯಾಗಬೇಕೆಂದು ಗ್ರಾಮಾಡಳಿತವು ಕಟ್ಟುನಿಟ್ಟಾಗಿ ಶಿಲಾಶಾಸನವನ್ನು ಬರೆಸಿ ನಿಲ್ಲಿಸಿದೆ. ಕದಂಬರ ಕಾಲದಿಂದಲೂ ಕೆರೆಗಳನ್ನು ಕಟ್ಟಿಸುತ್ತಿದ್ದರು ಕದಂಬರ ಮೂಲ ಸ್ಥಾನವಾಗಿರುವ ತಾಳಗುಂದದಲ್ಲಿ ಮಯೂರವರ್ಮನ ಕಾಲದಲ್ಲಿ ಕ್ರಿ.ಶ. ಸು. ಮೂರನೆಯ ಶತಮಾನದಲ್ಲಿ ನಿರ್ಮಾಣವಾಗಿದೆ. ಕ್ರಿ.ಶ. ೩೫೦ರಲ್ಲಿ ಇಂದಿನ ಶಿವಮೊಗ್ಗದ ಮಂಡಳಿಗೆ ಬಂದಿದ್ದ ಗಂಗರಾಜ್ಯ ಸ್ಥಾಪಕರಾದ ಧಡಿಗ ಮಾಧವರು ಮಂಡಳಿಯ ಬಹಿರ್ಬಾಗದೊಳ್ ಸಾಗಂಧಮಂ ಕೊಡೆ ಪಸರಿಸುವ ಸಹಸ್ರ ಪತ್ರ ವಪ್ಪಲಿರ್ದ ತಾವರೆಗಳಿಂ ನಾನಾ ಜಲಚ್ಚರಿಯು ಲಿಪದಿಂದೊಪ್ಪುವ ಹೆಗ್ಗರೆಯಂ ಕಂಡು ಬೀಡು ಬಿಟ್ಟು ಶ್ಲಾಘಿಸಿದರೆಂದು ಶಾಸನದಲ್ಲಿ ಹೇಳಿದೆ.

ಮಂಡಳಿ ಗಂಗರ ವೀರ ಗಂಗಪೆರ್ಮಾಡಿದೇವನು ಕನಕಪುರದಲ್ಲಿ ಒಂದು ಕೆರೆ ಕಟ್ಟಿಸಿದನು. ಪೊಂಬುಚದ ಶಾಂತರಸರ ಕಾಲದಲ್ಲಿದ್ದ ಪಟ್ಟಣ ಸಾಮಿ ನೊಕ್ಕಯ್ಯನು ಇದೇ ಪೊಂಬುಚದಲ್ಲಿ ಪಟ್ಟಣಸಾಮಿ ಮತ್ತು ಕುಕ್ಕರ ಹಳ್ಳಿ ಕೆರೆ ಕಟ್ಟಿಸಿದ್ದಾನೆ. ಹೊಯ್ಸಳ ವೀರ ಬಲ್ಲಾಳನ ಕಾಲದಲ್ಲಿ ಒಂದು ಕೆರೆ, ಒಂದು ಊರು ಮತ್ತು ಒಂದು ದೇವಾಲಯವನ್ನು ಕಟ್ಟಿಸಿದವನನ್ನು ಆದಿಗೌಂಡ ಎಂದು ಕರೆಯುತ್ತಿದ್ದರು. ವಿಜಯನಗರದ ಮೊದಲನೆಯ ದೇವರಾಯ (೧೪೦೬ – ೧೪೧೬)ನ ಅಮಾತ್ಯ ಲಕ್ಷ್ಮೀಧರನು ನಾಡಿನ ಮುಖ್ಯಸ್ಥರಿಗೆ ಕೆರೆಯಂ ಕಟ್ಟಿಸು ಬಾವಿಯಂ ತೆಗೆಸು ಎಂದು ಹೇಳುತ್ತಿದ್ದನಂತೆ. ಹೀಗೆ ಈ ಪ್ರದೇಶವನ್ನು ಆಳಿದ ಅರಸರು ಹಾಗೂ ಸಾಮಂತರ ಕಾಲದಲ್ಲಿ ಸಾವಿರಾರು ಕೆರೆಗಳನ್ನು ಕಟ್ಟಿಸಿದ್ದಾರೆ. ಅಷ್ಟೇ ಅಲ್ಲ ಕೆರೆಯ ನೀರಿನ ನಿರ್ವಹಣೆಯನ್ನು ಕುರಿತು ಶಾಸನ ಒಂದರಲ್ಲಿ ಈ ಕೆರೆಯ ನೀರು ಪುರುಷ ಪ್ರಮಾಣದಲ್ಲಿ ನಿಂತು ತಿಂಮಾಪುರಕ್ಕೆ ಸಲ್ಲಬೇಕು ಎಂದು ಹೇಳಿದೆ.

ಜಲಾಶಯ ನಿರ್ಮಾಣ : ಸಾಮಾನ್ಯವಾಗಿ ಕೆರೆಯನ್ನು ಬೆಟ್ಟ ಗುಡ್ಡಗಳ ಇಳಿಜಾರು ಅಥವಾ ಬಯಲು ಪ್ರದೇಶದಲ್ಲಿ ಕಟ್ಟಿಸಿರುವುದು ಕಂಡು ಬಂದಿದೆ. ಇದಕ್ಕೆ ನೀರಿನ ಆಸರೆ ಹಾಗೂ ಬರಬಹುದಾದ ನೀರಿನ ಪ್ರಮಾಣವನ್ನು ಪೂರ್ವಭಾವಿಯಾಗಿ ಅಂದಾಜು ಮಾಡಿದ ಸಂಭವವಿದೆ. ಹಲವು ಹಳ್ಳಿಗಳ ನೀರು ಹರಿದು ಬಂದು ಈ ಕೆರೆಯನ್ನು ತುಂಬಿಸಬಹುದು. ಕರ್ನಾಟಕದಲ್ಲಿ ಅರಸೀಕೆರೆ, ಮದಗದ ಕೆರೆ, ಕುಣಿಗಲು ಕೆರೆ, ದೋರ ಸಮುದ್ರ ಮುಂತಾದ ದೊಡ್ಡ ಕೆರೆಗಳಿವೆ. ಆದರೆ ಪ್ರಾಕೃತಿಕವಾಗಿ ಸೂಲೆ ಕೆರೆಯ ನಿರ್ಮಾಣ ಅಚ್ಚರಿಗೊಳಿಸುತ್ತದೆ. ಸುತ್ತಲೂ ಸಾಲುಗುಡ್ಡಗಳ ಸೀಳುಕಣಿವೆಯೊಂದರಲ್ಲಿ ನದಿ ಮತ್ತು ಹಳ್ಳಗಳು ಹರಿದು ಬರುತ್ತಿರುವುದನ್ನು ಗಮನಿಸಬಹುದು. ತಗ್ಗಾಗಿರುವ ಈ ಕಣಿವೆ ಅನೇಕ ಮೈಲುಗಳಷ್ಟು ವಿಶಾಲವಾಗಿದೆ. ಚನ್ನಗಿರಿ ತಾಲ್ಲೂಕಿನ ಸೂಳೆಕೆರೆಯ ಹೈದರಾಬಾದಿನ ನಿಜಾಮಸಾಗರ ಹಾಗೂ ಆಂಧ್ರದ ಕಡಪ ಬಳಿಯ ಕಂಬಂ ಸಾಗರಕ್ಕಿಂತಲೂ ವಿಶಾಲವಾಗಿ ದಕ್ಷಿಣ ಭಾರತದಲ್ಲಿಯೇ ದೊಡ್ಡಕೆರೆ ಎಂದು ಹೇಳಲಾಗಿದೆ. ಇದಕ್ಕೆ ಶಾಂತಿಸಾಗರ ಎಂಬ ಇನ್ನೊಂದು ಹೆಸರಿದೆ.

ದಂತಕಥೆ : ಈ ಕೆರೆಯನ್ನು ಕುರಿತು ದಂತಕಥೆಯೊಂದು ಪ್ರಚಲಿತವಿದೆ. ಇದರಂತೆ ಈ ಜಲಾಶಯವಿದ್ದ ಸ್ಥಳದಲ್ಲಿ ೧೨ನೆಯ ಶತಮಾನದಲ್ಲಿ ಸ್ವರ್ಗಾವತಿ ಎಂಬ ಪಟ್ಟಣವಿತ್ತು. ಇದರ ದೊರೆ ವಿಕ್ರಮನಿಗೆ ಗಂಡು ಸಂತಾನವಿರಲಿಲ್ಲ. ಇವನು ಬಿಲ್ಲಹಳ್ಳಿ ಗೌಡನಮಗನಾದ ರಾಗಿರಾಯ ಎಂಬ ಬಾಲಕನನ್ನು ದತ್ತು ತೆಗೆದುಕೊಂಡನು. ರಾಗಿರಾಯನಿಗೆ ಶಿವನ ಅನುಗ್ರಹದಿಂದ ಹೆಣ್ಣು ಮಗು ಹುಟ್ಟಿತು. ಈ ಮಗುವಿಗೆ ಶಾಂತವ್ವ ಎಂದು ಹೆಸರಿಡಲಾಯಿತು. ಮುಂದೆ ಶಾಂತವ್ವನಿಗೂ ಒಬ್ಬ ಬೇಡರ ನಾಯಕನಿಗೂ ಅಕ್ರಮ ಸಂಬಂಧ ಬೆಳೆಯಿತು. ರಾಜನು ತನ್ನ ಮೊಮ್ಮಗಳನ್ನು ಕೋಪದಿಂದ ‘ಸೂಳೆ’ ಎಂದು ಹೀನಾಯವಾಗಿ ಕಾಣಲು ಆರಂಭಿಸಿದನು. ಶಾಂತವ್ವೆಯು ತಾನು ಮಾಡಿದ ತಪ್ಪಿಗಾಗಿ ಈ ಕೆರೆಯನ್ನು ಕಟ್ಟಿಸಿದಳೆಂದೂ ಇವಳಿಂದ ಈ ಕೆರೆಗೆ ಸೂಳೆಕೆರೆ ಎಂಬ ಹೆಸರು ಬಂದಿತೆಂದು ಹೇಳಲಾಗಿದೆ. ಆದರೆ ಇದಕ್ಕೆ ಆಧಾರ ದೊರೆತಿಲ್ಲ. ಈ ಕೆರೆಯ ಒಡಲಿನಲ್ಲಿ ಸೋಮನ ಹಳ್ಳಿ ಮುಂತಾದ ಮೂವತ್ತು ಹಳ್ಳಿಗಳು ಮುಳುಗಿವೆ ಎಂದು ಪ್ರಚಲಿತವಿದೆ.

ಮಾಹಿತಿಗಳು ಸೂಳೆಕೆರೆಯ ಒಳಭಾಗದ ಏರಿಯಲ್ಲಿ ಕೆಲವು ಬೃಹದಾಕಾರವಾದ ಕಲ್ಲುಗಳನ್ನು ಜೋಡಿಸಿರುವಂತೆ ಕಾಣಿಸುತ್ತದೆ. ಇದನ್ನು ಕುರಿತು ಮೈಸೂರು ಗೆಜೆಟೆಯರಿನಲ್ಲಿ
Sulekere tank 14 square miles down to small kaltes or village reservoirs grew into existance necessarily without reference to scientific principles and were purely experimental as instance of large old tanks besides sulekere.

ಎಂದು ಹೇಳಿರುವಂತೆ ಇದನ್ನು ವೈಜ್ಞಾನಿಕವಾಗಿ ನಿರ್ಮಿಸಿಲ್ಲ. ಆದರೂ ನೀರಿನ ಒತ್ತಡವನ್ನು ತಡೆಯುವಂತೆ ಕಟ್ಟಿರುವುದು ಶ್ಲಾಘನೀಯವಾಗಿದೆ. ಈ ಕೆರೆಯ ಸುತ್ತಳತೆ ೧೦೩.೬೫ ಕಿ.ಮೀ. ಎಂದು ಶಿವಮೊಗ್ಗ ಜಿಲ್ಲಾ ಗೆಜೆಟಿಯರ್ನಲ್ಲಿ ಹೇಳಿದೆ.೧೧ ಅಲ್ಲದೆ ೬೫ ಕಿ.ಮೀ. ಎಂದೂ ಹೇಳಿದೆ. ಈ ಕೆರೆಯ ವಿಸ್ತೀರ್ಣ ೬೫೪೮ ಎಕರೆಗಳು. ಏರಿಯ ಉದ್ದ ೩೩೮ ಮೀ ಅಗಲ ೩೦ – ೪೮ ಮತ್ತು ೪೯ – ೩೭. ಮೀಟರ್ಗಳು. ಕೆರೆಯ ನೀರಿನ ಪ್ರಮಾಣ ಸು.೧೧,೯೯೪ ಯೂನಿಟ್ಗಳು. ಇದರಲ್ಲಿ ೨೮೭೬ ಹೆಕ್ಟೇರ್ ಪ್ರದೇಶದಲ್ಲಿ ನೀರು ನಿಂತಿದೆ. ಜಲಾಶಯದಲ್ಲಿ ೭೮ ಮಿಲಿಯನ್ ಕ್ಯೂಬಿಕ್ ಮೀಟರ್ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ.

ಈಗ ಈ ಕೆರೆಯಿಂದ ನೀರಾವರಿಗೆ ೭೨ ಮಿಲಿಯನ್ ಕ್ಯೂಬಿಕ್ ಮೀಟರ್ ನೀರು ಬಳಕೆಯಾಗುತ್ತಿದೆ. ಈ ಕೆರೆಯ ನೀರಿನ ಮಟ್ಟ ೨೭ ಅಡಿ ಅಥವಾ ೮.೨೩ ಮೀಟರ್ ಎಂದು ಕೆರೆಯ ದಂಡೆಯ ಮೇಲಿನ ಫಲಕದಲ್ಲಿ ಹೇಳಿದೆ. ಪ್ರಸಕ್ತ ಈ ಜಲಾಶಯದ ನೀರಿನಿಂದ ೭೧೦೭ ಎಕರೆ ಭೂಮಿ ಸಾಗುವಳಿಯಾಗುತ್ತಿದೆ. ಕೆರೆಯ ದಂಡೆಯ ಮೇಲೆ ಸು ೫ ಕಿ.ಮೀ. ರಸ್ತೆಯಲ್ಲಿ ಚನ್ನಗಿರಿಯಿಂದ ಸಂತೆಬೆನ್ನೂರಿಗೆ ಹೋಗುವ ವಾಹನಗಳು ಸಂಚರಿಸುತ್ತಿವೆ. ಇದರ ಜಲಾನಯನ ಪ್ರದೇಶ ೫೨೮ ಚದರ ಕಿ.ಮೀ. ಕೆರೆಯ ಹೊರಭಾಗದ ಅಣೆಕಟ್ಟಿನ ಹಿಂಭಾಗದಲ್ಲಿ ಭದ್ರಾನದಿಯ ೧೧೦೦ ಅಡಿ ಉದ್ದದ ಮೇಲುಕಾಲುವೆಯು ಹಾದು ಹೋಗಿದೆ.
ಸೂಳೆಕೆರೆಯಿಂದ ಮುಂದೆ ಹರಿದ್ರಾ ನದಿಯು ಹೊಸಳ್ಳಿ, ಕಣಿವೆ ಬಿಳಚಿ, ಕಂಸಾಗರ, ಬೆಳ್ಮುಂಡಿ, ಬಾನುವಳ್ಳಿ ಮುಂತಾದ ಗ್ರಾಮಗಳ ಮೂಲಕ ಹರಿದು ಹರಿಹರದಲ್ಲಿ ತುಂಗಭದ್ರಾ ನದಿಗೆ ಸಂಗಮಿಸಿದೆ.

ತೂಬುಗಳು ಆರಂಭದಲ್ಲಿ ಈ ಕೆರೆಗೆ ಹಲವಾರು ತೂಬುಗಳಿತ್ತೆಂದು ಹೇಳಲಾಗಿದೆ. ಪ್ರಸ್ತುತ ಹಳೆಯ ತೂಬುಗಳನ್ನೆಲ್ಲಾ ಮುಚ್ಚಿ ಈಗ ಸಿದ್ದನಾಲಾ ಮತ್ತು ಬಸವನಾಲಾ ಎಂಬ ಎರಡು ತೂಬುಗಳನ್ನು ಮಾತ್ರ ನಿರ್ಮಿಸಲಾಗಿದೆ. ಜಲಾಶಯನ ಏರಿಯಿಂದ ಸು. ೫ ಅಡಿ ದೂರದಲ್ಲಿ ಜಲಾಶಯದ ಒಳಗೆ ಕಟ್ಟಿರುವ ಈ ತೂಬುಗಳ ವಿನ್ಯಾಸ ಸೊಗಸಾಗಿದೆ. ತೂಬಿನ ಸಮೀಪದಲ್ಲಿ ಏರಿಯ ತಳಭಾಗದಲ್ಲಿ ಸು.೪ ಅಡಿ ಸುರಂಗವನ್ನು ಕಲ್ಲುಗಳಿಂದ ಕಟ್ಟಿದೆ. ಎರಡು ತೂಬುಗಳಲ್ಲಿಯೂ ಅಲಂಕೃತವಾದ ನಾಲ್ಕು ಶಿಲಾ ಸ್ಥಂಭಗಳಿವೆ ಇದರ ಮೇಲೆ ಗೋಪುರವಿದೆ ಮಂಟಪದ ನಡುವೆ ಶಿವಲಿಂಗವಿದೆ ಏರಿಯಿಂದ ಈ ಮಂಟಪಕ್ಕೆ ಹೋಗಲು ಉಕ್ಕಿನ ಸಾರವನ್ನು ಅಳವಡಿಸಿದೆ ಇದಕ್ಕೆ ಉಕ್ಕಿನ ಬಾಗಿಲಿದೆ. ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿರುವ ಈ ಎರಡು ಕಾಲುವೆಗಳಲ್ಲಿ ಹರಿಯುವ ನೀರಿನ ಮಟ್ಟವು ೭೩ ಆರ್. ಎಲ್. ಆಗಿದೆ. ಜಲಾಶಯದಿಂದ ಹೊರಡುವ ಕಾಲುವೆಗಳೂ ಸಹ ಸುಭದ್ರವಾಗಿವೆ. ತೂಬಿನ ಮೇಲಿರುವ ಶಿಲಾಮಂಟಪದಲ್ಲಿ ನಿಂತು ನೋಡುವ ಜಲಾಶಯದ ನೋಟ ಚಿತಾಹರಿಯಾದುದು. ಈ ಕೆರೆಯ ಕೋಡಿಯು ೬೦ – ೯೬ ಮೀಟರ್ ಉದ್ದವಾಗಿದ್ದು ೧,೮೨೮ ಮೀಟರ್ ನೀರು ಹರಿಯುತ್ತಿದೆ.
ಮೀನುಸಾಕಾಣೆnಈಚಿನ ವರ್ಷಗಳಲ್ಲಿ ಸೂಳೆ ಕೆರೆಯಲ್ಲಿ ಮೀನು ಸಾಕಣೆ ಕೇಂದ್ರವನ್ನು ಆರಂಭಿಸಲಾಗಿದೆ. ಇದಕ್ಕೆ ಇಲ್ಲಿ ಸಕಲ ಸೌಕರ್ಯವಿದೆ. ಕಟ್ಟೆಯ ಹಿಂಭಾಗದಲ್ಲಿ ಮೀನು ಮರಿ ಸಾಕಣೆಗಾಗಿ ೨೨ ತೊಟ್ಟಿಗಳನ್ನು ಕಟ್ಟಿದೆ. ಆದರೆ ಈಗ ೧೩ನ್ನು ಮಾತ್ರ ಬಳಸಲಾಗುತ್ತಿದೆ. ಮೀನುಗಾರಿಕೆಯನ್ನು ಸರಿಯಾಗಿ ಅಭಿವೃದ್ಧಿಪಡಿಸದೆ ಅಲಕ್ಷಿಸಲಾಗಿದೆ.

No comments:

Post a Comment